Bidar | ಸುರಕ್ಷಿತ ಗರ್ಭಪಾತ ಸೇವೆಗಳ ಕುರಿತು ಅರಿವು ಅಗತ್ಯ : ಡಾ.ಅನೀಲ್ ಚಿಂತಾಮಣಿ
ಅಂತರರಾಷ್ಟ್ರೀಯ ಸುರಕ್ಷಿತ ಗರ್ಭಪಾತ ದಿನಾಚರಣೆ

ಬೀದರ್: ‘ಅಂತಾರಾಷ್ಟ್ರೀಯ ಸುರಕ್ಷಿತ ಗರ್ಭಪಾತ ದಿನಾಚರಣೆ’ಯು ಒಗ್ಗಟ್ಟಿನ ಕಾರ್ಯಾಚರಣೆಯ ಮೂಲಕ ಎಲ್ಲರಿಗೂ ಆಯ್ಕೆ ಮತ್ತು ಸೇವೆಗಳ ಲಭ್ಯತೆಯನ್ನು ಸಬಲೀಕರಣಗೊಳಿಸುವ ಉದ್ದೇಶ ಹೊಂದಿದೆ. ಮಹಿಳೆಯು ಐದೂವರೆ ತಿಂಗಳಿನವರೆಗಿನ ಗರ್ಭಪಾತ ಸೇವೆಯನ್ನು ಕಾನೂನಾತ್ಮಕವಾಗಿ ಪಡೆಯಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅನೀಲ್ ಚಿಂತಾಮಣಿ ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಮಂಗಳವಾರ ‘ಅಂತಾರಾಷ್ಟ್ರೀಯ ಸುರಕ್ಷಿತ ಗರ್ಭಪಾತ ದಿನಾಚರಣೆ’ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಒಗ್ಗಟ್ಟಿನ ಕಾರ್ಯಾಚರಣೆ: ಎಲ್ಲರಿಗೂ ಆಯ್ಕೆ ಮತ್ತು ಸೇವೆಗಳ ಲಭ್ಯತೆಯನ್ನು ಸಬಲೀಕರಣಗೊಳಿಸುವುದು’ ಎಂಬ ಘೋಷವಾಕ್ಯದೊಂದಿಗೆ ಅಂತಾರಾಷ್ಟ್ರೀಯ ಸುರಕ್ಷಿತ ಗರ್ಭಪಾತ ದಿನಾಚರಣೆ ನಡೆಯುತ್ತಿದೆ. ಗರ್ಭಧರಿಸಿದ ಎರಡು ತಿಂಗಳಿನವರೆಗೆ ಮಾತ್ರೆಗಳ ಮೂಲಕ ಗರ್ಭಪಾತದ ಸೌಲಭ್ಯವಿದೆ. ಮೂರು ತಿಂಗಳಿನವರೆಗೆ ಗರ್ಭಪಾತವು ಸುಲಭ ಹಾಗೂ ಸುರಕ್ಷಿತವಾಗಿದೆ ಎಂದು ಅವರು ತಿಳಿಸಿದರು.
ಮನ್ನಾಏಖ್ಖೇಳಿ ಸಮುದಾಯ ಆರೋಗ್ಯ ಕೇಂದ್ರದ ಸ್ತ್ರೀರೋಗ ತಜ್ಞೆ ಡಾ. ಶೀಲಾ ವಾಗಮಾರೆ ಮಾತನಾಡಿ, ಗರ್ಭಧರಿಸಿದ ಎರಡು ತಿಂಗಳಿನವರೆಗೆ ಮಾತ್ರೆಗಳ ಮೂಲಕ ಗರ್ಭಪಾತದ ಸೌಲಭ್ಯವಿದ್ದು, ಮೂರು ತಿಂಗಳಿನವರೆಗೆ ಗರ್ಭಪಾತವು ಸುಲಭ ಹಾಗೂ ಸುರಕ್ಷಿತವಾಗಿದೆ. ನಾಲ್ಕೂವರೆ ತಿಂಗಳಿನವರೆಗೆ ಗರ್ಭಪಾತ ಕಾನೂನುಬದ್ಧವಾಗಿದ್ದು, ವಿಶೇಷ ಸಂದರ್ಭಗಳಲ್ಲಿ ಮಹಿಳೆಯು ಐದೂವರೆ ತಿಂಗಳಿನವರೆಗಿನ ಗರ್ಭಪಾತ ಸೇವೆಯನ್ನು ಕಾನೂನಾತ್ಮಕವಾಗಿ ಪಡೆಯಬಹುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಬೀದರ್ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಸುರಕ್ಷಿತ ಗರ್ಭಪಾತ ಹಾಗೂ ಅನಪೇಕ್ಷಿತ ಗರ್ಭಧಾರಣೆ ಕುರಿತು ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಿಸಿ ಮತ್ತು ಪಿಎನ್‌ಡಿಟಿ ನೋಡಲ್ ಅಧಿಕಾರಿ ಡಾ. ದಿಲೀಪ್ ಡೋಂಗ್ರೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ರಾಜಶೇಖರ್ ಪಾಟೀಲ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಕಲಾ ಬಿ. ಚಿನ್ನೂರ್, ಶಾಲುಬಾಯಿ, ಮಹೇಶ್ವರ್ ರೆಡ್ಡಿ ಹಾಗೂ ಮುದಸ್ಸರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.






