ಬೀದರ್ | ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ಸಂಚಾರಿ ನಿಯಮ ಪಾಲಿಸಲು ಜಾಗೃತಿ ಅಭಿಯಾನ

ಬೀದರ್ : ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸಂಚಾರಿ ನಿಯಮ ಪಾಲಿಸಬೇಕು ಎಂದು ಹೆಲ್ಮೆಟ್ ನೀಡುವ ಮೂಲಕ ಜಾಗೃತಿ ಮೂಡಿಸಲಾಯಿತು.
ಇಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ನೇತೃತ್ವದಲ್ಲಿ ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡುತ್ತಿರುವವರಿಗೆ ದಂಡ ಕಟ್ಟಿ, ಇಲ್ಲವಾದರೆ ಇಲ್ಲಿಂದಲೇ ಹೆಲ್ಮೆಟ್ ತೆಗೆದುಕೊಂಡು ಹೋಗಿ ಎನ್ನುವ ಅಭಿಯಾನ ನಡೆಸಲಾಯಿತು.
ಈ ಸಂದರ್ಭದಲ್ಲಿ ಎಸ್ಪಿ ಪ್ರದೀಪ್ ಗುಂಟಿ ಮಾತನಾಡಿ, ಜಿಲ್ಲೆಯ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು 15 ದಿನದ ಹಿಂದೆ ಮಾಧ್ಯಮದ ಮೂಲಕ ನಾವು ತಿಳಿಸಿದ್ದೇವೆ. ಆದರೂ ಸಹ ಕೆಲವೊಬ್ಬರು ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುತ್ತಿದ್ದಾರೆ. ಇದನ್ನು ಗಮನಿಸಿ ಇಂದು ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ ದಂಡ ಕಟ್ಟಿ, ಇಲ್ಲವಾದರೆ ಇಲ್ಲಿಂದಲೇ ಹೆಲ್ಮೆಟ್ ತೆಗೆದುಕೊಂಡು ಹೋಗಿ ಎನ್ನುವ ಅಭಿಯಾನ ಪ್ರಾರಂಭ ಮಾಡಿದ್ದೇವೆ. ಇದಕ್ಕೆ ಜನರು ಸ್ಪಂದನೆ ನೀಡುತ್ತಿದ್ದಾರೆ. ಸುಮಾರು ಜನ ಇಲ್ಲಿಂದಲೇ ಹೆಲ್ಮೆಟ್ ಖರೀದಿಸಿಕೊಂಡು ಹೋಗುತ್ತಿದ್ದಾರೆ. ಹೆಲ್ಮೆಟ್ ನಿಮ್ಮ ಸುರಕ್ಷತೆಗಾಗಿ ಇದೆ ಎಂದು ನಾವು ತಿಳಿಸುತ್ತಿದ್ದೇವೆ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು.
ನಾಲ್ಕು ಚಕ್ರದ ವಾಹನಗಳು ಕಾನೂನು ಬಾಹಿರವಾಗಿ ಪಾರ್ಕಿಂಗ್ ಮಾಡುತ್ತಿದ್ದಾರೆ. ಅವರಿಗೂ ಕೂಡ ಸೂಚನೆ ನೀಡುತಿದ್ದೇವೆ. ಕಾನೂನು ಬಾಹಿರವಾಗಿ ಪಾರ್ಕಿಂಗ್ ಮಾಡಿದರೆ ಅವರಿಗೆ ದಂಡ ವಿಧಿಸುತ್ತೇವೆ. ಎರಡು ಮೂರು ಸಲ ನೋಡಿ ಅವರ ಲೈಸೆನ್ಸ್ ರದ್ದುಗೊಳಿಸುತ್ತೇವೆ. ಹಾಗಾಗಿ ಕಾನೂನು ಬಾಹಿರವಾಗಿ ಪಾರ್ಕಿಂಗ್ ಮಾಡುವವರು ಇದನ್ನು ಗಮನಿಸಬೇಕು ಎಂದರು.
ಕರ್ಕಶ ಶಬ್ದ ಮಾಡುವ ಸುಮಾರು 80 ಬೈಕ್ ಸಿಜ್ ಮಾಡಿ, ಅವರ ಮೇಲೆ ದಂಡ ವಿಧಿಸಿದ್ದೇವೆ. ಇನ್ನು ಮುಂದೆಯೂ ಕರ್ಕಶ ಶಬ್ದ ಮಾಡುವ ಬೈಕ್ ಗಳನ್ನು ಸಿಜ್ ಮಾಡುತ್ತೇವೆ ಎಂದು ತಿಳಿಸಿದರು.
ಹೆಲ್ಮೆಟ್ ವಿತರಣೆ ಮಾಡಿ ಮಾತನಾಡಿದ ಸಂಚಾರಿ ಸಿಪಿಐ ಬಾಪು ಗೌಡ ಪಾಟೀಲ, ಇತ್ತೀಚೆಗೆ ಸಂಚಾರಿ ನಿಯಮ ಪಾಲನೆ ಮಾಡದ ಹಿನ್ನೆಲೆಯಲ್ಲಿ ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿವೆ. ಆದ್ದರಿಂದ ಎಲ್ಲರೂ ಸಂಚಾರಿ ನಿಯಮಗಳು ಪಾಲನೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಸಿಪಿಐ ಪಾಲಾಕ್ಷಯ್ಯ ಹಿರೇಮಠ್, ಸಂಚಾರಿ ಪಿಎಸ್ಐ ದಶರಥ್, ಪಿಎಸ್ಐ ಸಿದ್ಧಣ್ಣಾ ಗಿರಿಗೌಡ ಸೇರಿದಂತೆ ಇತರೆ ಪೊಲೀಸ್ ಸಿಬ್ಬಂದಿ ಹಾಜರಿದ್ದರು.







