Bidar | ಮೇ 15ರಂದು ಶಹಾಪುರದಲ್ಲಿ ಬಸವಾದಿ ಶರಣರ ಜಾಗೃತಿ ಸಮಾವೇಶ : ಆರ್.ಜಿ.ಶಟಕಾರ್

ಬೀದರ್: ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದಲ್ಲಿ ಮೇ 15ರಂದು ಸಂಜೆ 5 ಗಂಟೆಗೆ ಬಸವಾದಿ ಶರಣರ ಜಾಗೃತಿ ಸಮಾವೇಶ ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಕಲಬುರಗಿ ಅಧ್ಯಕ್ಷ ಆರ್.ಜಿ.ಶಟಕಾರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಿಪಿಎಸ್ ಮೈದಾನದಿಂದ ವಚನ ಗಾಯನದೊಂದಿಗೆ ಮೆರವಣಿಗೆ ಆರಂಭವಾಗಿ, ಹಳೆ ಬಸ್ ನಿಲ್ದಾಣದ ಎದುರಿನ ಶಾಲಾ ಮೈದಾನದಲ್ಲಿ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾ, ಸೌಹಾರ್ದ ಕರ್ನಾಟಕ, ಬಸವಪರ ಸಂಘಟನೆಗಳ ಒಕ್ಕೂಟ, ದಲಿತಪರ ಸಂಘಟನೆಗಳು, ಕಾಯಕಜೀವಿಗಳ ಒಕ್ಕೂಟ, ರೈತ, ಮಹಿಳಾ, ವಿದ್ಯಾರ್ಥಿ ಹಾಗೂ ಕಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗದ ಬೀದರ್, ಯಡ್ರಾಮಿ, ಶಾಬಾದ್, ಜೇವರ್ಗಿ, ಭಾಲ್ಕಿ, ಕಮಲಾಪುರ ಸೇರಿದಂತೆ ವಿವಿಧ ಪ್ರದೇಶಗಳಿಂದ ಬಸವಾಭಿಮಾನಿಗಳು ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಬಸವಪರ ಮಠಾಧೀಶರು ಹಾಗೂ ವಿಚಾರವಾದಿಗಳು ಮಾತನಾಡಲಿದ್ದು, ಶರಣ ತತ್ವಗಳ ಕುರಿತು ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.
ಶಹಾಪುರದಲ್ಲಿ “ಬಸವಾದಿ ಶರಣರ ಹಿಂದೂ ಸಮಾವೇಶ” ಎಂಬ ಹೆಸರಿನಲ್ಲಿ ಕೋಮುವಾದಿ ಕಾರ್ಯಕ್ರಮ ನಡೆಸುತ್ತಿರುವುದು ಖಂಡನೀಯ. ವೈದಿಕ ಪರಂಪರೆಯನ್ನು ಖಂಡಿಸಿ ತಾತ್ವಿಕ ಚಳವಳಿ ನಡೆಸಿದ್ದ ಶರಣರನ್ನು ಮತ್ತೆ ವೈದಿಕ ಚೌಕಟ್ಟಿನೊಳಗೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಸೌಹಾರ್ದ ಕರ್ನಾಟಕದ ಡಾ. ಮೀನಾಕ್ಷಿ ಬಾಳಿ ಮಾತನಾಡಿ, “ಯಾರೇ ಆಗಲಿ ಹಿಂದೂ ಸಮಾವೇಶ ನಡೆಸುವುದು ಅವರ ಹಕ್ಕು. ಆದರೆ ಬಸವಾದಿ ಶರಣರ ಹೆಸರಿನಲ್ಲಿ ಹಿಂದುತ್ವದ ವಿಚಾರಧಾರೆ ಹೇರಲು ಯತ್ನಿಸುವುದು ಸರಿಯಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಹಿಂದುತ್ವ ಎಂದರೆ ಮನುವಾದಿ ವಿಚಾರಧಾರೆ. ಶರಣರನ್ನು ಅದರೊಳಗೆ ಸೇರಿಸುವುದು ಅವರ ತತ್ವಗಳಿಗೆ ಅಪಚಾರ ಮಾಡುವಂತದ್ದು” ಎಂದು ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ್ ಬುಳ್ಳಾ ಮಾತನಾಡಿ, “ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ಸರ್ಕಾರ, ಅವರ ತತ್ವಗಳನ್ನು ರಕ್ಷಿಸುವ ಜವಾಬ್ದಾರಿಯನ್ನೂ ನಿಭಾಯಿಸಬೇಕು” ಎಂದು ಒತ್ತಾಯಿಸಿದರು.
“ಬಸವಣ್ಣ ಮತ್ತು ಬಸವಾದಿ ಶರಣರನ್ನು ಹಿಂದುತ್ವದ ರಾಜಕೀಯ ಆವರಣಕ್ಕೆ ಸೆಳೆಯುವ ಪ್ರಯತ್ನವನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಪದಾಧಿಕಾರಿ ರವೀಂದ್ರ ಶಾಬಾದಿ, ವಚನ ಸಮೂಹ ಸಂಸ್ಥೆಯ ಅಧ್ಯಕ್ಷ ಅಲ್ಲಮಪ್ರಭು ನಾವದಗೇರಿ, ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ರೇಷ್ಮಾ ಕುಂದನ್, ಮಹಾಸಭಾದ ಪದಾಧಿಕಾರಿಗಳಾದ ಶಾಂತಪ್ಪ ಪಾಟೀಲ್, ಹಣಮಂತರಾಯ್ ಪಾಟೀಲ್, ಹೋರಾಟಗಾರರಾದ ಆರ್.ಪಿ.ರಾಜಾ, ಗೌಸೊದ್ದಿನ್ ಹಾಗೂ ಸತೀಶ್ ಇದ್ದರು.






