Bidar | ಎಚ್ಐವಿ ಕುರಿತು ತಪ್ಪು ಕಲ್ಪನೆ ನಿವಾರಣೆಗೆ ಜಾಗೃತಿ ಅಗತ್ಯ : ಡಾ.ಧ್ಯಾನೇಶ್ವರ್ ನಿರಗುಡೆ
ಎಚ್ಐವಿ ಜಾಗೃತಿ ಕುರಿತು ಬೈಕ್ ರ್ಯಾಲಿ

ಬೀದರ್: ಎಚ್ಐವಿ (ಏಡ್ಸ್) ನಿಯಂತ್ರಣಕ್ಕಾಗಿ ಸರ್ಕಾರವು ಹಲವು ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಜನಸಾಮಾನ್ಯರು ಈ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಂಡು, ಜಾಗೃತರಾಗುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಧ್ಯಾನೇಶ್ವರ್ ನಿರಗುಡೆ ಹೇಳಿದರು.
ನಗರದಲ್ಲಿ ಶನಿವಾರ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದ ವತಿಯಿಂದ ನೆಹರು ಕ್ರೀಡಾಂಗಣದಿಂದ ಬಿವಿಬಿ ಕಾಲೇಜುವರೆಗೆ ಆಯೋಜಿಸಿದ್ದ ಬೈಕ್ ರ್ಯಾಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೀದರ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಘವೇಂದ್ರ ಉಪಾಧ್ಯ ಅವರು ಬೈಕ್ ರ್ಯಾಲಿಗೆ ಚಾಲನೆ ನೀಡಿದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅನೀಲಕುಮಾರ್ ಚಿಂತಾಮಣಿ ಮಾತನಾಡಿ, ಜನಸಾಮಾನ್ಯರಲ್ಲಿ ಎಚ್ಐವಿ (ಏಡ್ಸ್) ಕುರಿತು ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸುವುದು ಹಾಗೂ ಎಚ್ಐವಿ ಸೋಂಕಿತರನ್ನು ಸಮಾಜದಲ್ಲಿ ಕಳಂಕ ಮತ್ತು ತಾರತಮ್ಯಕ್ಕೆ ಒಳಪಡಿಸದಂತೆ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.
ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಸೇರಿದಂತೆ ಒಟ್ಟು 94 ಬೈಕ್ ಸವಾರರು ಜಾಗೃತಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಂ.ಡಿ. ಅಹಮದ್ ಉದ್ದಿನ್, ಡಾ. ದಿಲೀಪ್ ರಾಥೋಡ್, ಡಾ. ಕಿರಣ್ ಪಾಟೀಲ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಶಂಕ್ರಪ್ಪ ಬೊಮ್ಮಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮಹಾದೇವಪ್ಪ ಎಚ್. ಮಳಗೆ, ಆರ್ಸಿಹೆಚ್ ಅಧಿಕಾರಿ ಡಾ. ದಿಲೀಪ್ ಡೋಗ್ರಿ, ಡಾ. ರಾಜಶೇಖರ್ ಪಾಟೀಲ್, ಡಾ. ಸಂಗಾರೆಡ್ಡಿ, ಜಿಲ್ಲಾ ಏಡ್ಸ್ ಮೇಲ್ವಿಚಾರಕ ಸೂರ್ಯಕಾಂತ್ ಸಂಗೊಳ್ಳಿಕರ್, ಕ್ಲಸ್ಟರ್ ಪ್ರಿವೆನ್ಷನ್ ಅಧಿಕಾರಿ ಶಿವಶಂಕರ್ ಬೆಮಳಗಿ, ಮೊಬಿಲೈಸೇಶನ್ ಫಾರ್ ಏಡ್ಸ್ ಸುರಕ್ಷಾ ಜಿಲ್ಲಾ ಸಹಯೋಗಿ ವಿಶ್ವನಾಥ್ ಸ್ವಾಮಿ ಹಾಗೂ ಅರವಿಂದ್ ಕುಲಕರ್ಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.






