ಬೀದರ್ | ಮಾನವೀಯ ಪ್ರೇಮದ ಆಧಾರದ ಮೇಲೆ ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಿಸಿದರು : ಸುಮಂತ್ ಕಟ್ಟಿಮಣಿ

ಬೀದರ್ : ಸಮಾನತೆ, ಸಹೋದರತ್ವ ಹಾಗೂ ಮಾನವೀಯ ಪ್ರೇಮದ ಆಧಾರದ ಮೇಲೆ ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಿಸಿದರು ಎಂದು ಶರಣ ಸಾಹಿತ್ಯ ಚಿಂತಕ ಸುಮಂತ್ ಕಟ್ಟಿಮಣಿ ಅವರು ತಿಳಿಸಿದರು.
ನಗರದ ಅತಿವಾಳೆ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ವಚನ ಸಾಹಿತ್ಯ ಪರಿಷತ್ ಬೀದರ್ ಜಿಲ್ಲಾ ಘಟಕದ ವತಿಯಿಂದ 'ಶಿವಶರಣ ಹರಳಯ್ಯ ಹಾಗೂ ಕಲ್ಯಾಣಮ್ಮ' ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರು ಸಮಾನತೆ, ಸಹೋದರತ್ವ ಹಾಗೂ ಮಾನವೀಯ ಪ್ರೇಮದ ಆಧಾರದ ಮೇಲೆ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಹರಳಯ್ಯ ಮತ್ತು ಕಲ್ಯಾಣಮ್ಮರ ತ್ಯಾಗವು ಕಲ್ಯಾಣ ಕ್ರಾಂತಿಯ ಪ್ರಮುಖ ಪ್ರೇರಕ ಘಟನೆಯಾಗಿದೆ. ಬಸವಾದಿ ಶರಣರ ವಚನಗಳು ಸಂವಿಧಾನದ ತಾತ್ವಿಕ ಆಧಾರವಾಗಿವೆ ಎಂದರು.
ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಬಸವರಾಜ್ ಬಲ್ಲೂರ್ ಅವರು ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರ ವೈಚಾರಿಕ ಕ್ರಾಂತಿಯು ಪ್ರಜಾಪ್ರಭುತ್ವದ ಬೀಜ ಬಿತ್ತಿದ ಕ್ರಾಂತಿಯಾಗಿತ್ತು. ಅವರು ಹರಳಯ್ಯ ಮತ್ತು ಕಲ್ಯಾಣಮ್ಮರ ಚಮ್ಮಾವುಗೆ ಘಟನೆಯು ಮಾನವೀಯತೆ ಮತ್ತು ಸಮಾನತೆಯ ಶಾಶ್ವತ ಸಂಕೇತವಾಗಿದೆ ಎಂದು ಅಭಿಪ್ರಾಯಪಟ್ಟರು.
ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷೆ ಸುನಿತಾ ದಾಡಗೆ ಅವರು ಮಾತನಾಡಿ, ವಚನ ಚಿಂತನೆ ಮನೆಮನೆಗೂ ತಲುಪಬೇಕು. ಮಕ್ಕಳಲ್ಲಿ ಶರಣ ಸಂಸ್ಕೃತಿ, ಪ್ರೀತಿ, ಗೌರವ ಮತ್ತು ಮಾನವೀಯ ಮೌಲ್ಯ ಬೆಳೆಸುವ ಪ್ರಯತ್ನ ನಾವು ಮಾಡಬೇಕು ಎಂದು ಹೇಳಿದರು.
ಶೈಲಜಾ ಕಲ್ಯಾಣರಾವ್ ಚಳ್ಕಾಪುರೆ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಅಕ್ಕಮಹಾದೇವಿ ಮಹಿಳಾ ಸಾಂಸ್ಕೃತಿಕ ಸಂಘದ ಸದಸ್ಯೆ ಕಸ್ತೂರಿಬಾಯಿ ಬಿರಾದಾರ್, ಶಕುಂತಲಾ ಮಲ್ಕಪ್ಪನೋರ್, ಮೀನಾಕ್ಷಿ ಪಾಟೀಲ್, ಸವಿತಾ ಗಂಧಿಗುಡೆ, ರುಕ್ಮಿಣಿ ಕೋಟೆ, ಲಕ್ಷ್ಮೀ ಸಿರ್ಸಿ, ಉಮಾಕಾಂತ್ ಮೀಸೆ ಹಾಗೂ ಬಸವರಾಜ್ ಮೂಲಗೆ ಸೇರಿದಂತೆ ಇತರರು ಇದ್ದರು.







