ಬೀದರ್ | ಬಸವಣ್ಣರ ಮೂರ್ತಿ ವಿರೂಪ ಪ್ರಕರಣ; ಮಹಾರಾಷ್ಟ್ರ ಮೂಲದ ಟ್ರ್ಯಾಕ್ಟರ್ ಚಾಲಕನ ಬಂಧನ

ಸಾಂದರ್ಭಿಕ ಚಿತ್ರ
ಬೀದರ್ : ಭಾಲ್ಕಿ ತಾಲ್ಲೂಕಿನ ದಾಡಗಿ ಕ್ರಾಸ್ ನಲ್ಲಿರುವ ಬಸವಣ್ಣರ ಮೂರ್ತಿಯ ಕೈ ಮುರಿದು ವಿರೂಪಗೊಳಿಸಿರುವ ಪ್ರಕರಣದಲ್ಲಿ ಟ್ರ್ಯಾಕ್ಟರ್ ಚಾಲಕನನ್ನು ಬಂಧಿಸಲಾಗಿದೆ ಎಂದು ಖಟಕ್ ಚಿಂಚೋಳಿ ಪೊಲೀಸ್ ಠಾಣೆಯ ಪಿಎಸ್ಐ ಸುದರ್ಶನ್ ರೆಡ್ಡಿ ಹೇಳಿದ್ದಾರೆ.
ಜ.14 ರ ಮಧ್ಯರಾತ್ರಿ ಸುಮಾರು 3 ಗಂಟೆಗೆ ಈ ಘಟನೆ ನಡೆದಿದ್ದು, ಬಸವಣ್ಣನ ಮೂರ್ತಿ ಮೇಲೆ ಮತ್ತು ಅಕ್ಕ ಪಕ್ಕ ಕಬ್ಬಿನ ಗುರುತುಗಳು ಸಿಕ್ಕಿದ್ದರಿಂದ ಕಬ್ಬು ತುಂಬಿದ್ದ ವಾಹನವೇ ಹೊಡೆದಿರಬಹುದು ಎಂದು ಶಂಕಿಸಲಾಗಿತ್ತು.
ಅಂದಿನ ರಾತ್ರಿ ಆ ಹೊತ್ತಿಗೆ ಮಹಾರಾಷ್ಟ್ರ ಮೂಲದ ಕಬ್ಬು ತುಂಬಿದ ಟ್ರ್ಯಾಕ್ಟರ್ ಒಂದು ಘೋಡವಾಡಿ ಗ್ರಾಮದಿಂದ ಉದಗೀರ್ ಪಟ್ಟಣದ ಸಕ್ಕರೆ ಕಾರ್ಖಾನೆಗೆ ಹೋಗಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅಂದು ರಾತ್ರಿ ಇಡೀ ಆ ಒಂದು ಕಬ್ಬಿನ ಟ್ರ್ಯಾಕ್ಟರ್ ಬಿಟ್ಟರೆ ಬೇರೆ ಯಾವುದೇ ಕಬ್ಬಿನ ವಾಹನ ಅಲ್ಲಿಂದ ಹೋಗಿರಲಿಲ್ಲ. ಜ.16 ರಂದೇ ಆ ಟ್ರ್ಯಾಕ್ಟರ್ ಮಾಲಕನನ್ನು ವಿಚಾರಿಸಿದಾಗ ತಪ್ಪೋಪ್ಪಿಕೊಂಡಿದ್ದಾನೆ. ಟ್ರ್ಯಾಕ್ಟರ್ ಚಾಲಕ ಕೂಡ ಮಹಾರಾಷ್ಟ್ರ ಮೂಲದವನೇ ಆಗಿದ್ದಾನೆ ಎಂದು ತಿಳಿಸಿದ್ದಾರೆ.
ಈ ಘಟನೆ ವಿರುದ್ಧ ಬಸವ ಅನುಯಾಯಿಗಳು ಅಂದು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು. ಪ್ರಕರಣ ದಾಖಲಿಸಿ ತಪ್ಪಿತಸ್ಥರನ್ನು ಬಂಧಿಸಿ, ಬಸವಣ್ಣನವರ ನೂತನ ಪ್ರತಿಮೆ ಅನಾವರಣ ಮಾಡಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂತೆಗೆದುಕೊಳ್ಳಲಾಗಿತ್ತು.
ಈ ಕುರಿತು ಖಟಕ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.







