Bidar | ಬಿರ್ಸಾ ಮುಂಡಾ ಕೇವಲ ಸ್ವಾತಂತ್ರ್ಯ ಹೋರಾಟಗಾರರಲ್ಲ, ಸಾಮಾಜಿಕ ಪರಿವರ್ತನೆಯ ಹರಿಕಾರರು: ಸುರೇಖಾ

ಬೀದರ್: ಬಿರ್ಸಾ ಮುಂಡಾ ಅವರು ಬ್ರಿಟಿಷರ ವಿರುದ್ಧ ಹೋರಾಡಿದ ಧೀರ ಹೋರಾಟಗಾರರಾಗಿದ್ದರು. ಅವರು ಕೇವಲ ಸ್ವಾತಂತ್ರ್ಯ ಹೋರಾಟಗಾರರಾಗಿರದೆ, ಸಾಮಾಜಿಕ ಪರಿವರ್ತನೆಯ ಹರಿಕಾರರೂ ಆಗಿದ್ದರು ಎಂದು ಅಪರ ಜಿಲ್ಲಾಧಿಕಾರಿ ಸುರೇಖಾ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರವಿವಾರ ಆಯೋಜಿಸಿದ್ದ ಕ್ರಾಂತಿವೀರ ಬಿರ್ಸಾ ಮುಂಡಾ ಅವರ ಜಯಂತಿ ಕಾರ್ಯಕ್ರಮದಲ್ಲಿ ಬಿರ್ಸಾ ಮುಂಡಾ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪನಮನ ಅರ್ಪಿಸಿದ ಬಳಿಕ ಅವರು ಮಾತನಾಡಿದರು.
ಬಿರ್ಸಾ ಮುಂಡಾ ಅವರು ಮೂಢನಂಬಿಕೆ, ಸಾಮಾಜಿಕ ಅಸಮಾನತೆ ಹಾಗೂ ಶೋಷಣೆಯ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಎಲ್ಲ ಸಮುದಾಯದ ಜನರು ಶಿಕ್ಷಣ, ಸಂಘಟನೆ ಮತ್ತು ಸ್ವಾಭಿಮಾನದ ಮೂಲಕ ಬದುಕು ಕಟ್ಟಿಕೊಳ್ಳಬೇಕು ಎಂಬ ಆಶಯ ಹೊಂದಿದ್ದರು ಎಂದರು.
ಅಲ್ಪಾವಧಿಯ ಬದುಕಿನಲ್ಲಿಯೇ ಅಪಾರ ಹೋರಾಟದ ಚೈತನ್ಯವನ್ನು ಮೂಡಿಸಿದವರು ಬಿರ್ಸಾ ಮುಂಡಾ. ಆದಿವಾಸಿ ಸಮುದಾಯದ ಮೇಲೆ ಬ್ರಿಟಿಷರು ನಡೆಸುತ್ತಿದ್ದ ಶೋಷಣೆ, ಭೂಮಿ ಕಬಳಿಕೆ, ಸಾಮಾಜಿಕ ಅನ್ಯಾಯ ಮತ್ತು ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ ಅವರು, ಜನರಲ್ಲಿ ಹೋರಾಟದ ಕಿಚ್ಚು ಹೊತ್ತಿಸಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಆದಿವಾಸಿ ವೀರರ ತ್ಯಾಗ, ಬಲಿದಾನ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ದಿನವಾಗಿ ಈ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ರಾಜಗೊಂಡ್ ಕಾಲೋನಿಯ ಜೈ ಸೇವಾ ಆಶ್ರಮದ ರತನ್ ಮಹಾರಾಜ್ ಮಾತನಾಡಿ, ಬಿರ್ಸಾ ಮುಂಡಾ ಅವರು ಕೇವಲ 25 ವರ್ಷಗಳ ಬದುಕಿನಲ್ಲಿಯೇ ಜನರಿಗಾಗಿ ಹಾಗೂ ಸರ್ವಧರ್ಮದ ಸಮುದಾಯಗಳಿಗಾಗಿ ಶತಮಾನಗಳ ಕಾಲ ನೆನಪಿನಲ್ಲಿ ಉಳಿಯುವಂತಹ ಹೋರಾಟ ನಡೆಸಿದ ವೀರರಾಗಿದ್ದರು. ಅವರ ಆದರ್ಶಗಳನ್ನು ಇಂದಿನ ಪೀಳಿಗೆಯೂ ತಮ್ಮ ನಿಜಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸೂರ್ಯಕಾಂತ್ ಬಿರಾದಾರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗಿರೀಶ್ ರಂಜೋಳಕರ್, ತಹಶೀಲ್ದಾರ್ ಶಂಕ್ರಯ್ಯ ಬಂಕಾಪೂರ್, ಹಿರಿಯ ಸಾಹಿತಿ ಮಾಣಿಕ್ ನೇಳಗಿ, ಮಾಳಪ್ಪ ಅಡಸಾರೆ, ಸುನೀಲ್ ಭಾವಿಕಟ್ಟಿ, ರಾಜೇಂದ್ರ ಪಾರ್ಧಿ, ವಿಜಯಕುಮಾರ್ ಡುಮ್ಮೆ, ಸುನೀಲ್ ಖಾಸೆಂಪೂರ್, ಶರಣಪ್ಪ ಖಾಸೆಂಪೂರ್, ಚಂದ್ರು ಶಾಮು ಪುಷ್ನಾಳೆ, ಶನ್ಮೂಖಪ್ಪ ಶೆಕಾಪೂರ್, ಬೀರಪ್ಪ ವಡಗಾಂವ್, ಪಂಢರಿ ನೇಳಗೆ, ಸಂಜು ಕೋಲಿ ಅಲಿಯಂಬರ್, ನಂದು ಪಾರ್ಧಿ, ಗಣಪತ್ ಪಾರ್ಧಿ, ಸೋಪಾನ್ ಪಾರ್ಧಿ, ಲಕ್ಷ್ಮಣ ಪಾರ್ಧಿ, ಲಕ್ಷ್ಮೀ ಪಾರ್ಧಿ, ವಿವೇಕ್ ರಾಯಶೇಡಮ್, ಪ್ರೇಮ್ ರಾಯಶೇಡಮ್ ಹಾಗೂ ಜೀತು ತಳಾಸಮ್ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.






