Bidar | ರಾಜ್ಯ ಸರಕಾರದ ವಿರುದ್ಧ ಬಿಜೆಪಿಯಿಂದ ಅಣಕು ಶವಯಾತ್ರೆ

ಬೀದರ್: ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಯನ್ನು ಪ್ರಶ್ನಿಸಿ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆಯಾಗಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಗುರುವಾರ ಅಣಕು ಶವಯಾತ್ರೆ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ಈ ವೇಳೆ ಕಾರ್ಯಕರ್ತರೊಬ್ಬರನ್ನು ಹೆಗಲ ಮೇಲೆ ಹೊತ್ತು ಸರ್ಕಾರದ ಅಣಕು ಶವಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ್ ಪಾಟೀಲ್, ರಾಜ್ಯದ ಕಾಂಗ್ರೆಸ್ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದ್ದು, ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ಆರೋಪಿಸಿದರು. ರೈತರು, ಮಹಿಳೆಯರು, ಯುವಕರು ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದೂ ಅವರು ದೂರಿದರು.
ರಾಜ್ಯ ಸರ್ಕಾರದ ಸಾಲದ ಪ್ರಮಾಣ ಹೆಚ್ಚಾಗಿದ್ದು, ಹಣಕಾಸು ಇಲಾಖೆಯ ಪತ್ರವೇ ಆರ್ಥಿಕ ಸ್ಥಿತಿಯ ಬಗ್ಗೆ ಎಚ್ಚರಿಕೆ ನೀಡಿದೆ ಎಂದು ಪಾಟೀಲ್ ಹೇಳಿದರು. ಸರ್ಕಾರವು ಲಕ್ಷಾಂತರ ಕೋಟಿ ರೂಪಾಯಿ ಸಾಲ ಮಾಡಿದ್ದು, ರಾಜ್ಯದ ಒಟ್ಟು ಸಾಲದ ಮೊತ್ತ 8 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ ಎಂದು ಅವರು ಆರೋಪಿಸಿದರು.
ಬರ ಪರಿಹಾರ ಸೇರಿದಂತೆ ವಿವಿಧ ಯೋಜನೆಗಳಿಗೆ ಹಣದ ಕೊರತೆ ಇದೆ ಎಂದು ಹಣಕಾಸು ಇಲಾಖೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರೂ, ಸುಮಾರು 32 ಸಾವಿರ ಕೋಟಿ ರೂ. ಮೌಲ್ಯದ ಹೊಸ ಯೋಜನೆಗಳನ್ನು ಸರ್ಕಾರ ಘೋಷಿಸಿದೆ. ರಸ್ತೆ ಅಭಿವೃದ್ಧಿಗೆ 10 ಸಾವಿರ ಕೋಟಿ ರೂ. ನೀಡುವುದಾಗಿ ಹೇಳಿರುವುದೂ ವಾಸ್ತವ ಸ್ಥಿತಿಗೆ ವಿರುದ್ಧವಾಗಿದೆ ಎಂದು ಅವರು ಟೀಕಿಸಿದರು.
ವಿಕಲಚೇತನರ ಪಿಂಚಣಿ, ವೃದ್ಧಾಪ್ಯ ವೇತನ ಹಾಗೂ ವಿಧವಾ ವೇತನ ಸೇರಿದಂತೆ ಹಲವು ಸಾಮಾಜಿಕ ಭದ್ರತಾ ಯೋಜನೆಗಳ ಹಣ ಜಮೆಯಾಗುತ್ತಿಲ್ಲ ಎಂದು ಆರೋಪಿಸಿದ ಅವರು, ಶಿಕ್ಷಣ ಇಲಾಖೆಯಲ್ಲಿ ಶಾಲಾ ಮಕ್ಕಳಿಗೆ ವಿತರಿಸಿರುವ ಶೂ ಮತ್ತು ಸಾಕ್ಸ್‌ಗಳ ಗುಣಮಟ್ಟದ ಬಗ್ಗೆ ಭ್ರಷ್ಟಾಚಾರದ ಅನುಮಾನವಿದೆ ಎಂದರು. ಶಿಕ್ಷಕರ ನೇಮಕಾತಿ ಹಾಗೂ ಸಂಬಳ ಪಾವತಿಗೂ ಹಣಕಾಸಿನ ಸಮಸ್ಯೆ ಎದುರಾಗಿದೆ ಎಂದು ಅವರು ದೂರಿದರು.
ರಾಜ್ಯದ ಹಣಕಾಸಿನ ನೈಜ ಸ್ಥಿತಿಯನ್ನು ಸರ್ಕಾರ ಸಾರ್ವಜನಿಕರ ಮುಂದೆ ಬಹಿರಂಗಪಡಿಸಬೇಕು. ಮುಖ್ಯಮಂತ್ರಿ ರಾಜ್ಯದ ಆರ್ಥಿಕ ಪರಿಸ್ಥಿತಿಯ ಕುರಿತು ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ಸೋಮನಾಥ್ ಪಾಟೀಲ್ ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜಶೇಖರ್ ನಾಗಮೂರ್ತಿ, ಬಾಬುವಾಲಿ, ಬಾಬುರಾವ್ ಕಾರುಬಾರಿ, ರಾಜರೆಡ್ಡಿ, ಬಸವರಾಜ್ ಪವಾರ್, ಮಹೇಶ್ವರ್ ಸ್ವಾಮಿ, ರಾಜಕುಮಾರ್ ಪಾಟೀಲ್ ನೇಮತಾಬಾದ್, ರಾಜಕುಮಾರ್ ಚಿದ್ರಿ, ಸಂಗಮೇಶ್ ನಾಸಿಗಾರ್, ಸೋಮಶೇಖರ್ ಪಾಟೀಲ್ ಗಾದಗಿ, ಶಶಿ ಹೊಸಳ್ಳಿ, ದೀಪಕ್ ಗಾದಗೆ, ರಾಜೇಂದ್ರ ಪೂಜಾರಿ, ಅಶೋಕಕುಮಾರ್ ಕರಂಜಿ, ಸಂಗಮೇಶ್ ಗುಮ್ಮೆ , ರೋಷನ್ ವರ್ಮಾ, ಸುನೀಲ್ ಗೌಳಿ, ವಿಶ್ವನಾಥ್ ಪಾಟೀಲ್ ಮುಗದಾಳ್, ಚಂದು ಪಾಟೀಲ್, ಗುರುನಾಥ್ ಜ್ಯಾಂತಿಕರ್, ಭೋಷಣ್ ಪಾಠಕ್, ವಿಕ್ರಮ್ ಮುದಾಳೆ, ಮಹೇಶ್, ನವೀನ್ ಚಿದ್ರೆ, ನರೇಶ್ ಗೌಳಿ, ವಿರಯ್ಯ ಸ್ವಾಮಿ, ಗೋಪಾಲ್, ಲುಂಬಿನಿ ಗೌತಮ್, ಹಣಮಂತ್ ಬುಳ್ಳಾ, ಶ್ರೀನಿವಾಸ್ ಚೌಧರಿ, ಗಣೇಶ್ ಭೋಸ್ಲೆ ಹಾಗೂ ಬಸವರಾಜ್ ಮೂಲಗೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.






