Bidar | ರೈತರ ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

ಬೀದರ್ : ರೈತರು, ಕಾರ್ಮಿಕರು, ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಗ್ರಾಮೀಣ ಭಾಗದ ಸಾರ್ವಜನಿಕರ ವಿವಿಧ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಬಿಜೆಪಿ ಮುಖಂಡ ಈಶ್ವರಸಿಂಗ್ ಠಾಕೂರ್ ನೇತೃತ್ವದಲ್ಲಿ ಶುಕ್ರವಾರ ಜನವಾಡದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಹಾಗೂ ಶಾಂತಿಯುತ ಪ್ರತಿಭಟನೆ ನಡೆಸಲಾಯಿತು.
ಜನವಾಡದಲ್ಲಿ ಆರಂಭವಾದ ಪಾದಯಾತ್ರೆಯು ಮರಖಲ್, ಚಿಕ್ಕಪೇಟ್ ಹಾಗೂ ರಿಂಗ್ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು. ಬಳಿಕ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.
ಮನವಿಯಲ್ಲಿ, ಜಿಲ್ಲೆಯ ರೈತರು ಕೃಷಿ ಸಾಲದ ಹೊರೆಯಿಂದ ಸಂಕಷ್ಟದಲ್ಲಿರುವುದರಿಂದ ಸಾಲಮನ್ನಾ ಕುರಿತು ರಾಜ್ಯ ಸರ್ಕಾರಕ್ಕೆ ಜಿಲ್ಲಾಡಳಿತ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಲಾಯಿತು.
ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರ ಮಾಸಾಶನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಅನ್ವಯವಾಗುವ ವಾರ್ಷಿಕ 32 ಸಾವಿರ ರೂ. ಆದಾಯ ಮಿತಿಯನ್ನು ರದ್ದುಪಡಿಸುವಂತೆ ಸರ್ಕಾರಕ್ಕೆ ಶಿಫಾರಸು ಸಲ್ಲಿಸಬೇಕು ಎಂದು ಆಗ್ರಹಿಸಲಾಯಿತು.
ಗ್ರಾಮೀಣ ಪ್ರದೇಶಗಳಲ್ಲಿ ಜೀರ್ಣಗೊಂಡಿರುವ ವಿದ್ಯುತ್ ಕಂಬಗಳು ಹಾಗೂ ತಂತಿಗಳನ್ನು ತಕ್ಷಣ ಬದಲಾಯಿಸಿ ಸಾರ್ವಜನಿಕರು ಮತ್ತು ರೈತರ ಸುರಕ್ಷತೆ ಖಚಿತಪಡಿಸಬೇಕು ಎಂದು ಮನವಿ ಮಾಡಲಾಯಿತು.
ತಹಶೀಲ್ದಾರ್ ಕಚೇರಿಗಳಲ್ಲಿ ಕರಾರು ಫೋಡಿ, ನಮೂನೆ-10, ಹದ್ದಬಸ್ತ್ ಸೇರಿದಂತೆ ವಿವಿಧ ಕಂದಾಯ ಅರ್ಜಿಗಳ ವಿಲೇವಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಲಾಯಿತು.
ಜನವಾಡ ಪೊಲೀಸ್ ಠಾಣೆ ವ್ಯಾಪ್ತಿಯ ಕಳ್ಳತನ ಪ್ರಕರಣಗಳ ಆರೋಪಿಗಳನ್ನು ಶೀಘ್ರ ಬಂಧಿಸಿ ತನಿಖೆ ವೇಗಗೊಳಿಸಬೇಕು. ಸ್ಥಗಿತಗೊಂಡಿರುವ ಜನವಾಡ ನದಿ ಕುಡಿಯುವ ನೀರಿನ ಯೋಜನೆಯನ್ನು ಪುನರಾರಂಭಿಸಿ, ಜನವಾಡ ಹಾಗೂ ಮಾಳೇಗಾಂವ್ ಹೋಬಳಿಯ ಎಲ್ಲ ಗ್ರಾಮಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಸಬೇಕು ಎಂದು ಆಗ್ರಹಿಸಲಾಯಿತು.
ಅಲ್ಲದೆ, ಜನವಾಡ–ಅಲಿಯಾಬಾದ್ (ಜೆ) ರಸ್ತೆ ನಿರ್ಮಾಣ, ಚಿಮಕೋಡ್–ಅಲ್ಲಾಪುರ್ ಹಾಗೂ ಚಿಮಕೋಡ್–ನೇಮತಾಬಾದ್ ಸಂಪರ್ಕ ಸೇತುವೆಗಳ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಾರ್ವಜನಿಕರ ಸಂಚಾರಕ್ಕೆ ತಾತ್ಕಾಲಿಕ ರಸ್ತೆ ನಿರ್ಮಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್, ಪಿರಪ್ಪ ಯರನಳ್ಳಿ, ರಾಜೇಂದ್ರ ಪೂಜಾರಿ, ಶಶಿಧರ್ ಹೊಸಳ್ಳಿ, ಲುಂಬಿಣಿ ಗೌತಮ್, ರಾಜಕುಮಾರ್ ಪಾಟಿಲ್, ಬಾಬುರಾವ್ ಮಲ್ಕಾಪೂರ್, ಲಕ್ಷ್ಮಣ್ ರಾಠೋಡ್, ಗುರುನಾಥ್ ಜ್ಯಾಂತಿಕರ್, ನಾಗೇಂದ್ರ ಪಾಟಿಲ್, ನಿಜಲಿಂಗ್ ಪಾಟೀಲ್, ವಿಜಯಕುಮಾರ್ ಗಾದಗಿ, ಭೀಮಣ್ಣ ಚಿಕಪೇಟ್, ಪ್ರಕಾಶ್ ಕೋಳಿ, ವಿಜಯಕುಮಾರ್ ಅಣಕಲೆ, ಸಂತೋಷ್ ಬಿರಾದರ್, ಶಂಕರ್ ಹಲ್ಗೆ, ಗೀತಾ ಠಾಕೂರ್, ಸುರಜಸಿಂಗ್ ಠಾಕೂರ್, ಅಶೋಕ್ ಪಾಟೀಲ್, ಮಲ್ಲಿಕಾರ್ಜುನ್ ಕಾರಬಾರಿ, ಭದ್ರೇಶ್ ಬಸಂತಪೂರ್ ಹಾಗೂ ಸಂತೋಷ್ ಕಾಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.






