ಬೀದರ್ | ಬಾಲಕನಿಗೆ ಜಾತಿ ನಿಂದನೆ ಮಾಡಿ ಥಳಿಸಿದ ಆರೋಪ : ಪ್ರಕರಣ ದಾಖಲು

ಬೀದರ್ : ಶಾಲೆಯ ಆವರಣದಲ್ಲಿ ಕ್ರಿಕೆಟ್ ಆಡುವಾಗ ಕ್ರಿಕೆಟ್ ಬಾಲ್ ತರಲು ಹೋದ 9ನೇ ತರಗತಿ ಬಾಲಕನನ್ನು ಯುವಕರಿಬ್ಬರು ಜಾತಿ ನಿಂದನೆ ಮಾಡಿ ಥಳಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಮಂಗಳವಾರ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
ಈ ಕುರಿತು ಬಾಲಕನ ತಂದೆ ನೀಡಿದ ದೂರಿನಲ್ಲಿ, ನನ್ನ ಮಗ 9ನೇ ತರಗತಿಯಲ್ಲಿ ಓದುತ್ತಿದ್ದಾನೆ. ಸೋಮವಾರ ಶಾಲೆಯ ಆವರಣದಲ್ಲಿ ಕ್ರಿಕೆಟ್ ಆಟವಾಡುತ್ತಿರುವಾಗ ಕ್ರಿಕೆಟ್ ಬಾಲ್ ಅಲ್ಲೇ ಸಿಗರೇಟ್ ಸೇದುತ್ತಾ ಕುಳಿತಿರುವ ಇಬ್ಬರು ಯುವಕರ ಕಡೆಗೆ ಹೋಗಿದೆ. ಬಾಲ್ ತರಲು ಹೋದ ನನ್ನ ಮಗನನ್ನು ಆ ಇಬ್ಬರು ಯುವಕರು ಜಾತಿ ನಿಂದನೆ ಮಾಡಿ ಥಳಿಸಿದ್ದಾರೆ. ಸಾಯಂಕಾಲ ಸುಮಾರು 7 ಗಂಟೆವರೆಗೆ ನನ್ನ ಮಗನನ್ನು ಅದೇ ಸ್ಥಳದಲ್ಲಿ ಕುಳ್ಳಿರಿಸಿದ್ದು, ಈ ವಿಷಯ ಯಾರಿಗಾದರೂ ಹೇಳಿದರೆ ನಿನ್ನ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಡಿಸಿಆರ್‌ಇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.
Next Story





