ಬೀದರ್ | ಶಿಶು ಮರಣ ಪ್ರಮಾಣ ಕಡಿಮೆ ಮಾಡಲು ಸ್ತನ್ಯಪಾನ ಬಹಳ ಮುಖ್ಯ : ಡಾ.ವರ್ಷಾ ತೊಂಡಾರೆ

ಬೀದರ್ : ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಸ್ತನ್ಯಪಾನ ಮಾಡಿಸುವುದು ಬಹಳ ಮುಖ್ಯವಾಗಿದೆ ಎಂದು ಕೇಂದ್ರ ನೂರು ಹಾಸಿಗೆ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಆರೈಕೆಯ ಮಕ್ಕಳ ತಜ್ಞೆ ಡಾ.ವರ್ಷಾ ತೊಂಡಾರೆ ಅವರು ತಿಳಿಸಿದರು.
ನಗರದ ತಾಯಿ ಮತ್ತು ಮಕ್ಕಳ ಆರೈಕೆ ಕೇಂದ್ರ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಇಂದು ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಗು ಜನಿಸಿದ ಒಂದು ಗಂಟೆಯೊಳಗೆ ಸ್ತನ್ಯಪಾನ ಮಾಡಿಸುವುದು ಕೊಲೊಸ್ಟ್ರೋಮ್ ಸೇವನೆಯ ಪ್ರಾಮುಖ್ಯವಾಗಿದೆ. ಮೊದಲ ಆರು ತಿಂಗಳವರೆಗೆ ಕಡ್ಡಾಯವಾಗಿ ಸ್ತನ್ಯಪಾನ ಮಾಡುವುದರಿಂದ ಆರಂಭಿಕ ಬಾಲ್ಯದ ಬೆಳವಣಿಗೆ ಹೆಚ್ಚಿಸಿ ಪೌಷ್ಟಿಕಾಂಶವನ್ನು ಸುಧಾರಿಸುತ್ತದೆ ಎಂದು ತಿಳಿಸಿದ ಅವರು, ಎಲ್ಲಾ ತಾಯಂದಿರು ಹಾಗೂ ಗರ್ಭಿಣಿಯರು ಎಚ್ಚೆತ್ತುಕೊಂಡು ಎದೆಹಾಲಿನ ಮಹತ್ವದ ಬಗ್ಗೆ ಅರಿತುಕೊಳ್ಳಬೇಕು. ಕನಿಷ್ಠ ಎರಡು ವರ್ಷದವರೆಗೆ ಸ್ತನ್ಯಪಾನ ಮಾಡಬೇಕು ಎಂದು ಸಲಹೆ ನೀಡಿದರು.
ಆರ್ ಸಿ ಹೆಚ್ ಅಧಿಕಾರಿ ಡಾ.ಶಿವಶಂಕರ್ ಬಿ. ಅವರು ಮಾತನಾಡಿ, ದೇಶಾದ್ಯಂತ ಸ್ತನ್ಯಪಾನದ ಮಹತ್ವ ತಿಳಿಸಲು, ಶಿಶುಗಳ ಮತ್ತು ತಾಯಂದಿರ ಆರೋಗ್ಯ ಸುಧಾರಣೆಗಾಗಿ ಸ್ತನ್ಯಪಾನವನ್ನು ಮುಂದುವರೆಸಲು, ಉತ್ತೇಜಿಸಲು ಮತ್ತು ಬೆಂಬಲಿಸಲು ಆ.1 ರಿಂದ 7 ರ ವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸ್ತ್ರೀ ರೋಗ ತಜ್ಞ ಡಾ.ಸರೋಜ ಪಾಟೀಲ್, ಜಿಲ್ಲಾ ಕಾರ್ಯಕ್ರಮ ಸಂಯೋಜಕ ಶಿವಶಂಕರ್ ಬೇಮಳಗಿ, ಮಕ್ಕಳ ತಜ್ಞ ಡಾ.ಗೌಸ್ ಪಾಶಾ, ಡಾ.ಪ್ರೀತಿ, ಭಾಗ್ಯಲಕ್ಷ್ಮೀ, ಸಂಗೀತಾ, ರವಿ ಹಾಗೂ ಅನಿತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.







