Bidar | ಬ್ರಿಮ್ಸ್ ವೈದ್ಯೆ ಡಾ.ಉಮಾ ದೇಶಮುಖ್‌ಗೆ ‘ಟೀಚರ್ಸ್ ಡೇ ಅವಾರ್ಡ್–2026’

ಬೀದರ್: ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆ ಹಾಗೂ ಸಮರ್ಪಣಾ ಮನೋಭಾವದಿಂದ ಸಲ್ಲಿಸಿರುವ ಗಣನೀಯ ಸೇವೆಯನ್ನು ಗುರುತಿಸಿ, ಬೀದರ್‌ನ ಬ್ರಿಮ್ಸ್ ಸಂಸ್ಥೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಡಾ. ಉಮಾ ದೇಶಮುಖ್ ಅವರನ್ನು ಐಎಂಎ ಕರ್ನಾಟಕ ರಾಜ್ಯ ಶಾಖೆಯ ‘ಟೀಚರ್ಸ್ ಡೇ ಅವಾರ್ಡ್–2026’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಜ್ಞಾನ, ಕೌಶಲ್ಯ, ಸಾಮರ್ಥ್ಯ, ಮೌಲ್ಯಗಳು ಹಾಗೂ ಉತ್ತಮ ಮನೋಭಾವ ಬೆಳೆಸುವಲ್ಲಿ ಅವರು ಸಲ್ಲಿಸಿರುವ ಶೈಕ್ಷಣಿಕ ಮತ್ತು ಮಾರ್ಗದರ್ಶಕ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸೆ. 5ರಂದು ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಕರ್ನಾಟಕ ಮೆಡಿಕಲ್ ಕಾಲೇಜ್ ಮತ್ತು ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಆಡಿಟೋರಿಯಂನಲ್ಲಿ ನಡೆಯಲಿರುವ ಐಎಂಎ–ಎಎಂಎಸ್ ರಾಷ್ಟ್ರೀಯ ಮಟ್ಟದ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಡಾ. ಉಮಾ ದೇಶಮುಖ್ ಅವರ ಈ ಸಾಧನೆಗೆ ಬ್ರಿಮ್ಸ್‌ನ ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.




