ಬೀದರ್ | ಕಲಾ ಪ್ರತಿಭೋತ್ಸವಕ್ಕೆ ಅರ್ಜಿ ಆಹ್ವಾನ

ಬೀದರ್ : ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಮಕ್ಕಳು ಮತ್ತು ಯುವಜನರ ಕಲಾ ಪ್ರತಿಭೆಯನ್ನು ಗುರುತಿಸಿ ಅವರಿಗೆ ಉತ್ತೇಜನ ನೀಡುವ ಮತ್ತು ಅವರು ತಮ್ಮ ಕಲಾ ನೈಪುಣ್ಯವನ್ನು ವೃದ್ಧಿಗೊಳಿಸುವಂತೆ ಪ್ರೋತ್ಸಾಹಿಸಲು ಕಲಾ ಪ್ರತಿಭೋತ್ಸವ ಏರ್ಪಡಿಸಲಾಗಿದ್ದು, ನಾನಾ ಪ್ರತಿಭೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೀದರ್ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಏಕವ್ಯಕ್ತಿ ಸ್ಪರ್ಧೆಗಳು : ಶಾಸ್ತ್ರೀಯ ನೃತ್ಯ (10 ನಿಮಿಷ), ಸುಗಮ ಸಂಗೀತ (7 ನಿಮಿಷ), ಚಿತ್ರಕಲೆ (120 ನಿಮಿಷ), ಜಾನಪದ ಗೀತೆ (7 ನಿಮಿಷ), ಹಿಂದೂಸ್ತಾನಿ ಅಥವಾ ಕರ್ನಾಟಕ ವಾದ್ಯ ಸಂಗೀತ (7 ನಿಮಿಷ), ಹಿಂದೂಸ್ತಾನಿ ಅಥವಾ ಕರ್ನಾಟಕ ಶಾಸ್ತ್ರೀಯ ಸಂಗೀತ (7 ನಿಮಿಷ) ಹಾಗೂ ನನ್ನ ಮೆಚ್ಚಿನ ಸಾಹಿತಿ, ಆಶುಭಾಷಣ (7 ನಿಮಿಷ).
ಸಮೂಹ ಸ್ಪರ್ಧೆ : ನಾಟಕ (45 ನಿಮಿಷ).
ಅರ್ಹತೆಗಳು : ಬಾಲ ಪ್ರತಿಭೆ ವಿಭಾಗದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಕನಿಷ್ಠ 8 ವರ್ಷ ತುಂಬಿ, 14 ವರ್ಷಕ್ಕಿಂತ ಕಡಿಮೆ ಇರಬೇಕು. ಕಿಶೋರ ಪ್ರತಿಭೆಯ ವಿಭಾಗದಲ್ಲಿ ಭಾಗಹಿಸುವ ಅಭ್ಯರ್ಥಿಗಳಿಗೆ ಕನಿಷ್ಠ 14 ವರ್ಷ ಭರ್ತಿಯಾಗಿ, 18 ವರ್ಷಕ್ಕಿಂತ ಕಡಿಮೆಯಿರಬೇಕು. ಯುವ ಪ್ರತಿಭೆ ವಿಭಾಗದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿ, 30 ವರ್ಷಕ್ಕಿಂತ ಕಡಿಮೆ ಇರಬೇಕು. ಸ್ಪರ್ಧೆಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬ ಅಭ್ಯರ್ಥಿಯು ವಯೋಮಿತಿಯ ದೃಢೀಕರಣಕ್ಕಾಗಿ ಶಾಲೆಯಿಂದ ಪಡೆದ ಪ್ರಮಾಣ ಪತ್ರ ಸಲ್ಲಿಸಬೇಕು. ಶಾಲೆಯಿಂದ ಬಾರದ ಅಭ್ಯರ್ಥಿಯು ಅವರ ವಯಸ್ಸಿನ ಬಗ್ಗೆ ಪಂಚಾಯತ್, ನಗರಸಭೆ, ಪುರಸಭೆ ಅಥವಾ ಪಾಲಿಕೆ ಕಚೇರಿಯಿಂದ ದೃಢೀಕರಣ ಪತ್ರ ಪಡೆದು ಸಲ್ಲಿಸಬೇಕು. ಸಮೂಹ ಸ್ಪರ್ಧೆಯಾದ ನಾಟಕದಲ್ಲಿ ಭಾಗವಹಿಸುವ ತಂಡದ ಸದಸ್ಯರ ಸಂಖ್ಯೆ ಕನಿಷ್ಠ 10 ಜನ ಇದ್ದು, 15 ಜನ ಮೀರಬಾರದು. ಒಬ್ಬ ಸ್ಪರ್ಧಿಯು ಒಂದಕ್ಕಿಂತ ಹೆಚ್ಚು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಯಾವುದೇ ಸ್ಪರ್ಧೆಯಲ್ಲಿ ತೀರ್ಪುಗಾರರು ನೀಡುವ ಆಯ್ಕೆಯೇ ಅಂತಿಮ ಎಂದು ಪರಿಗಣಿಸಲಾಗುವುದು.
ಈ ಸ್ಪರ್ಧೆಗಳು ನ.17 ಮತ್ತು 18ರ ಬೆಳಿಗ್ಗೆ 10 ಗಂಟೆಗೆ ನಗರದ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಆಸಕ್ತ ಬಾಲ, ಕಿಶೋರ, ಯುವಕ ಅಭ್ಯರ್ಥಿಗಳು ತಮ್ಮ ಸ್ವ-ವಿವರದ ಪರಿಚಯದ ಪತ್ರ, ವಯಸ್ಸಿನ ದಾಖಲಾತಿ ಮತ್ತು ಭಾಗವಹಿಸುವ ಕಲಾಪ್ರಕಾರವನ್ನು ಸ್ಪಷ್ಠವಾಗಿ ಪತ್ರದಲ್ಲಿ ನಮೂದಿಸಿ ನ.10ರ ಸಂಜೆ 5 ಗಂಟೆ ಒಳಗಾಗಿ ನಗರದ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಇರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಕಶರ ಕಚೇರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.







