Bidar | ದಲಿತ ಬಾಲಕಿ ಕೊಲೆ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಒತ್ತಾಯಿಸಿ ಕ್ಯಾಂಡಲ್ ಮಾರ್ಚ್

ಬೀದರ್: ಔರಾದ್ ತಾಲ್ಲೂಕಿನ ಬೆಳಕುಣಿ ಗ್ರಾಮದ 16 ವರ್ಷದ ದಲಿತ ಬಾಲಕಿಯ ಕೊಲೆ ಪ್ರಕರಣದ ತನಿಖೆಯನ್ನು ಎಸ್‌ಐಟಿ ಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಶನಿವಾರ ಸಂಜೆ ಕ್ಯಾಂಡಲ್ ಮಾರ್ಚ್ ನಡೆಸಲಾಯಿತು.
ನಗರದ ಸಮೀಪದ ಚಿದ್ರಿ ಗ್ರಾಮದಿಂದ ಅಂಬೇಡ್ಕರ್ ವೃತ್ತದವರೆಗೆ ಸುಮಾರು 5 ಕಿಲೋಮೀಟರ್ ದೂರ ಮೆರವಣಿಗೆ ನಡೆಯಿತು. ಬಳಿಕ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಮಹಿಳೆಯರು ಹಾಗೂ ಸಾರ್ವಜನಿಕರು ಸೇರಿ ಮೌನಾಚರಣೆ ನಡೆಸಿ ಮೃತ ಬಾಲಕಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, “ಕುಸ್ತಿ ತರಬೇತಿ ನೀಡುವುದಾಗಿ ಹೇಳಿ ಲಖನ್ ಪವಾರ್ ಎಂಬಾತ ಬಾಲಕಿಯನ್ನು ಮನೆ ಕೆಲಸಕ್ಕೆ ದುಡಿಸಿಕೊಂಡಿದ್ದಾನೆ. ಆಕೆಗೆ ಹಿಂಸೆ ನೀಡಿದ್ದಾನೆ. ಇದನ್ನು ಸಹಿಸಲಾಗದೆ ಬಾಲಕಿ ಮನೆಗೆ ಹೋದಾಗ ಆಕೆಯನ್ನು ಅಪಹರಿಸಿ, ಮನಬಂದಂತೆ ಥಳಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ. ಆದರೆ ಪೊಲೀಸರು ಇದನ್ನು ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾರೆ” ಎಂದು ದೂರಿದರು.
ಮೃತ ಬಾಲಕಿಯ ಶವವನ್ನು ಮರು ಪರೀಕ್ಷೆಗೆ ಒಳಪಡಿಸಬೇಕು. ಪ್ರಕರಣದ ತನಿಖೆಗೆ ಎಸ್‌ಐಟಿ ತಂಡ ರಚಿಸಬೇಕು. ಆರೋಪಿ ಲಖನ್ ಪವಾರ್‌ಗೆ ಮಂಪರು ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.
ಬೇಡಿಕೆಗಳನ್ನು ಈಡೇರಿಸದಿದ್ದರೆ ಔರಾದ್ ಹಾಗೂ ಬೀದರ್ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಚಿದ್ರಿ ಗ್ರಾಮದ ಮಹಿಳೆಯರು, ವಿವಿಧ ದಲಿತ ಸಂಘಟನೆಗಳ ಮುಖಂಡರು ಸೇರಿದಂತೆ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.




