Bidar | ಸಿಇಓ ಗಿಟ್ಟೆ ಮಾಧವ ವಿಠ್ಠಲರಾವ್ ಹಲವು ಕಡೆ ದಿಢೀರ್ ಭೇಟಿ

ಬೀದರ್: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿಟ್ಟೆ ಮಾಧವ ವಿಠ್ಠಲರಾವ್ ಅವರು ಮಂಗಳವಾರ ಬೆಳಿಗ್ಗೆ 6:30 ಗಂಟೆಯಿಂದಲೇ ಬೀದರ್ ತಾಲೂಕಿನ ಕಮಠಾಣ, ಬಗ್ದಲ್ ಹಾಗೂ ಚಟ್ನಳ್ಳಿ ಗ್ರಾಮಗಳಿಗೆ ದಿಢೀರ್ ಭೇಟಿ ನೀಡಿ, ಹಲವು ಕಡೆ ಪರಿಶೀಲನೆ ನಡೆಸಿದರು.
ಕಮಠಾಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಆಸ್ಪತ್ರೆಯ ಪ್ರತಿಯೊಂದು ಮೂಲೆಗೂ ಹೋಗಿ ಸ್ವಚ್ಛತೆ ಸೇರಿ ಹಲವು ತಪಾಸಣೆ ನಡೆಸಿದರು. ಪ್ರಮುಖವಾಗಿ ರೋಗಿಗಳಿಗೆ ನೀಡುವ ಮಾತ್ರೆಗಳು ಹಾಗೂ ಔಷಧಗಳ ದಾಸ್ತಾನು ಸರಿಯಾಗಿದೆಯೇ ಎಂದು ಫಾರ್ಮಸಿಯಲ್ಲಿ ಪರಿಶೀಲಿಸಿದರು. ಬಳಿಕ ಲ್ಯಾಬೋರೇಟರಿಗೆ ಭೇಟಿ ನೀಡಿ ಅಲ್ಲಿನ ತಪಾಸಣಾ ವ್ಯವಸ್ಥೆಯನ್ನು ವೀಕ್ಷಿಸಿದರು.
ಅಲ್ಲಿಂದ ನೇರವಾಗಿ ಕಮಠಾಣ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಪರಿಶೀಲನೆ ನಡೆಸಿದರು. ನಂತರ ಸ್ಥಳದಲ್ಲಿದ್ದ ಗ್ರಾಮಸ್ಥರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಈ ವೇಳೆ ಊರಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಜನರು ಅಳಲು ತೋಡಿಕೊಂಡರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಅವರು, ಗ್ರಾಮದ ನೀರಿನ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಲಾಗುವುದು. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.
ಬಳಿಕ ಬಗ್ದಲ್‌ನಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ, ಶಾಲೆಯ ಅಡುಗೆಮನೆಗೆ ತೆರಳಿ ಅಲ್ಲಿ ಬಳಸುವ ತರಕಾರಿ ಹಾಗೂ ದಿನಸಿ ಪದಾರ್ಥಗಳ ಗುಣಮಟ್ಟವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು. ಇದೇ ವೇಳೆ ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ಮುಂದಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಬಗ್ದಲ್ ಮುರಾರ್ಜಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಬೇಕು. ಪ್ರತಿಯೊಬ್ಬರೂ ಶಿಸ್ತನ್ನು ಅಳವಡಿಸಿಕೊಂಡು ಚೆನ್ನಾಗಿ ಓದಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕೊನೆಯದಾಗಿ ಚಟ್ನಳ್ಳಿ ಗ್ರಾಮದ ವಿಬಿ–ಜಿ ರಾಮ್‌ಜಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಕೇವಲ ವೀಕ್ಷಣೆ ಮಾಡದೇ ಸ್ಥಳದಲ್ಲಿದ್ದ ಕಾರ್ಮಿಕರ ಹಾಜರಾತಿಯನ್ನು ತಾವೇ ಖುದ್ದಾಗಿ ಪಡೆದರು. ಅಷ್ಟೇ ಅಲ್ಲದೆ, ತಾವೂ ಕೂಡ ಕೆಲಕಾಲ ಕಾರ್ಮಿಕರೊಂದಿಗೆ ಕಾಯಕದಲ್ಲಿ ತೊಡಗಿಸಿಕೊಂಡರು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು ಹಾಗೂ ಇತರೆ ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿ ಇದ್ದರು.






