Bidar | ಆಹಾರ ವಿತರಣೆಯಲ್ಲಿ ಅವ್ಯವಸ್ಥೆ ಸಹಿಸುವುದಿಲ್ಲ: ಡಾ.ಎಚ್.ಕೃಷ್ಣ

ಬೀದರ್ : ಜಿಲ್ಲೆಯಲ್ಲಿ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಹಾಗೂ ದುರ್ಬಲ ವರ್ಗಗಳಿಗೆ ಆಹಾರ ವಿತರಣೆಯಲ್ಲಿ ಯಾವುದೇ ರೀತಿಯ ಅವ್ಯವಸ್ಥೆ ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಹೆಚ್. ಕೃಷ್ಣ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ–2013ರ ಅನುಷ್ಠಾನದ ಪರಿಶೀಲನೆಗಾಗಿ ಆಯೋಗದ ಸದಸ್ಯರ ತಂಡ ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುತ್ತಿದೆ. ಆಹಾರವು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದ್ದು, ಬಡವರು, ನಿರ್ಗತಿಕರು, ಮಕ್ಕಳು, ಮಹಿಳೆಯರು ಹಾಗೂ ದುರ್ಬಲ ವರ್ಗಗಳಿಗೆ ಗುಣಮಟ್ಟದ ಆಹಾರ ತಲುಪುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಜಿಲ್ಲೆಯ ವಿವಿಧ ತಾಲೂಕುಗಳ ನ್ಯಾಯಬೆಲೆ ಅಂಗಡಿಗಳು, ಆಹಾರಧಾನ್ಯ ಗೋದಾಮುಗಳು, ಅಂಗನವಾಡಿ ಕೇಂದ್ರಗಳು, ಶಾಲೆಗಳ ಮಧ್ಯಾಹ್ನದ ಬಿಸಿಯೂಟ, ಆಸ್ಪತ್ರೆಗಳ ಎನ್‌ಆರ್‌ಸಿ ಘಟಕಗಳು ಹಾಗೂ ವಿವಿಧ ಇಲಾಖೆಗಳ ವಸತಿ ನಿಲಯಗಳಲ್ಲಿ ಆಹಾರ ವಿತರಣೆಯ ಗುಣಮಟ್ಟವನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ಒಟ್ಟು 14 ಇಲಾಖೆಗಳು ಆಯೋಗದ ವ್ಯಾಪ್ತಿಗೆ ಬರುತ್ತವೆ. ಅಕ್ಕಿ ಕಳ್ಳಸಾಗಣೆ, ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ರಮ, ಅಂಗನವಾಡಿ ಹಾಗೂ ವಸತಿ ನಿಲಯಗಳಲ್ಲಿ ಕಳಪೆ ಅಥವಾ ಅಸಮರ್ಪಕ ಆಹಾರ ವಿತರಣೆ ಕುರಿತ ದೂರುಗಳಿದ್ದರೆ ಸಾರ್ವಜನಿಕರು ಗೌಪ್ಯವಾಗಿ ಮಾಹಿತಿ ನೀಡಬಹುದು ಎಂದು ಹೇಳಿದರು.
ಜುಲೈ 17ರವರೆಗೆ ಆಯೋಗದ ತಂಡ ಜಿಲ್ಲೆಯಲ್ಲಿ ಪರಿಶೀಲನೆ ನಡೆಸಲಿದ್ದು, ಆಹಾರ ಸಂಬಂಧಿತ ದೂರುಗಳಿದ್ದಲ್ಲಿ ಸಾರ್ವಜನಿಕರು 94484 66099 ಹಾಗೂ 99450 37681 ಸಂಖ್ಯೆಗಳಿಗೆ ಸಂಪರ್ಕಿಸಿ ಅಹವಾಲು ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಆಯೋಗದ ಸದಸ್ಯರಾದ ಮಾರುತಿ ದೊಡ್ಡಲಿಂಗಣ್ಣವರ್, ಲಿಂಗರಾಜ ಕೋಟೆ, ಸುಮಂತ್ ರಾವ್ ಹಾಗೂ ಕೆ.ಎಸ್. ವಿಜಯಲಕ್ಷ್ಮೀ ಉಪಸ್ಥಿತರಿದ್ದರು.






