ಬೀದರ್ | ಅಮಿತ್ ಶಾ ವಿರುದ್ಧ ಚಿದ್ರಿ ಗ್ರಾಮಸ್ಥರಿಂದ ಪ್ರತಿಭಟನೆ

ಬೀದರ್ : ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು, ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ಬಿ. ಶ್ಯಾಮಸುಂದರ ಸಮಿತಿ ಚಿದ್ರಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಇಂದು ನೂರಾರು ಜನ ಚಿದ್ರಿ ಗ್ರಾಮಸ್ಥರು, ಅಂಬೇಡ್ಕರ್ ಪ್ರತಿಕೃತಿಯ ಮೆರವಣಿಗೆ ಮಾಡಿಕೊಂಡು, ಅಮಿತ್ ಶಾ ವಿರುದ್ಧ ಘೋಷಣೆ ಕೂಗುತ್ತಾ, ಚಿದ್ರಿ ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಸುಮಾರು 8 ಕಿ.ಮೀ ದೂರ ಕಾಲ್ನಡಿಗೆಯಲ್ಲಿ ಬಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಂಸತ್ತಿನಲ್ಲಿ ಅಮಿತ್ ಶಾ ಅವರು ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ತಕ್ಷಣವೇ ಅವರು ಕ್ಷಮೆಯಾಚಿಸಬೇಕು. ಹಾಗೆಯೇ ರಾಷ್ಟ್ರಪತಿ ಅವರು ಅಮಿತ್ ಶಾ ಅವರ ರಾಜೀನಾಮೆ ಪಡೆದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿ. ಶ್ಯಾಮಸುಂದರ ಸಮಿತಿ ಚಿದ್ರಿಯ ಅಧ್ಯಕ್ಷ ರಜನೀಶ ಮದಾಳೆ, ಉಪಾಧ್ಯಕ್ಷ ಸಿದ್ದಾರ್ಥ್ ಬಾನೆ, ಬಿಎಸ್ಪಿ ಜಿಲ್ಲಾಧ್ಯಕ್ಷ ಕಪಿಲ್ ಗೋಡಬೊಲೆ, ಭೀಮಾ ಕೊರೆಗಾಂವ್ ಸೈನ್ಯದ ಜಿಲ್ಲಾಧ್ಯಕ್ಷ ರವಿ ಬಿ. ಚಿದ್ರಿ, ಬಿಎಸ್ಪಿ ಜಿಲ್ಲಾ ಕಾರ್ಯಾಧ್ಯಕ್ಷ ಶಕ್ತಿಕಾಂತ್ ಭಾವಿದೊಡ್ಡಿ, ಜಗದೇವಿ ದರ್ಗಾ, ರವಿ ಕೆಳಕೇರಿ, ಗುಂಡಪ್ಪ ಹೊಸಮನಿ, ರಮಾಬಾಯಿ ಭಾವಿದೊಡ್ಡಿ ಹಾಗೂ ಶರಣಪ್ಪ ಚೇರಮ್ಯಾನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.







