ಬೀದರ್ | ಮಕ್ಕಳಿಗೆ ಕನ್ನಡ ಭಾಷೆಯ ಇತಿಹಾಸ, ಪರಂಪರೆ ಬಗ್ಗೆ ತಿಳಿಸಬೇಕು : ವೀಣಾ ಜೋಶಿ

ಬೀದರ್ : ಮಕ್ಕಳಿಗೆ ಕನ್ನಡ ಭಾಷೆಯ ಇತಿಹಾಸ ಹಾಗೂ ಪರಂಪರೆ ಬಗ್ಗೆ ತಿಳಿಸಬೇಕು ಎಂದು ಲಾಡಗೇರಿಯ ನಮ್ಮೂರ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ವೀಣಾ ಜೋಶಿ ಹೇಳಿದರು.
ಇತ್ತೀಚೆಗೆ ನಗರದ ಲಾಡಗೇರಿ ಬಡಾವಣೆಯ ನಮ್ಮೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ತ ಚಂದ್ರಶೇಖರ ಅಜಾದ್ ಯುವಕ ಸಂಘ ಏರ್ಪಡಿಸಿರುವ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ನಮ್ಮ ಆತ್ಮದ ನುಡಿ. ಕನ್ನಡ ಭಾಷೆಯ ಗೌರವ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹೊಸ ಪೀಳಿಗೆಗೆ ಕನ್ನಡದ ಶ್ರೀಮಂತ ಪರಂಪರೆ, ಸಾಹಿತ್ಯ ಮತ್ತು ಹೋರಾಟದ ಇತಿಹಾಸ ಪರಿಚಯಿಸುವ ಕಾರ್ಯ ಶಾಲಾ ಮಟ್ಟದಲ್ಲಿಯೇ ಪ್ರಾರಂಭವಾಗಬೇಕು. ಕನ್ನಡ ಭಾಷೆ ಉಳಿಯಬೇಕಾದರೆ ಕನ್ನಡ ಮಾತನಾಡುವ ಮನಸ್ಸು ಬೆಳೆಸಬೇಕಾಗಿದೆ ಎಂದರು.
ಶಾಲೆಯ ಮುಖ್ಯಗುರು ಚಂದ್ರಕಾಂತ್ ಮಾತನಾಡಿ, ಕನ್ನಡ ಭಾಷೆಯ ಸಂಸ್ಕೃತಿ, ಪರಂಪರೆ ಮತ್ತು ಸಾಹಿತ್ಯ ನಮ್ಮ ಅಸ್ತಿತ್ವದ ಅಡಿಪಾಯವಾಗಿದ್ದು, ವಿದ್ಯಾರ್ಥಿಗಳು ದಿನನಿತ್ಯದಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಕುಮಾರ ಶೆಟ್ಟಿ ಬಣ) ಜಿಲ್ಲಾ ಅಧ್ಯಕ್ಷ ಪೀಟರ್ ಚಿಟ್ಟಗುಪ್ಪ, ಪ್ರಮುಖರಾದ ರಮೇಶ್ ಜಮಾದಾರ್, ಚಂದ್ರಶೇಖರ ಅಜಾದ್ ಯುವಕ ಸಂಘದ ಅಧ್ಯಕ್ಷ ವಿಜಯಕುಮಾರ್ ಭಂಡೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶೇಶಿಕಾಂತ್ ಬಿರಾದಾರ್, ಮಹೇಂದ್ರಕುಮಾರ್, ಶಂಕರ್ ಮಂಡ್ರಪ್ಪನೋರ್, ಸತೀಶ್ ರೆಡ್ಡಿ, ಯೋಹಾನ್ ಹಲಗೆ, ಶ್ರೀನಿವಾಸ್ ಇಮಾಂದಾರ್, ರಮೇಶ ಬಿರಾದಾರ್ ಹಾಗೂ ಮಹಾರುದ್ರಪ್ಪಾ ಚಿಕ್ಲೆ ಸೇರಿದಂತೆ ಆಶಾ ಕಾರ್ಯಕರ್ತರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







