ಬೀದರ್ | ಮಕ್ಕಳು ಮೊಬೈಲ್ ಬಿಟ್ಟು ಪುಸ್ತಕ ಓದಬೇಕು : ಡಾ. ಎಸ್. ಪ್ರಭು

ಬೀದರ್ : ಇಂದಿನ ಮಕ್ಕಳು ಮೊಬೈಲ್ ಬಿಟ್ಟು ಪುಸ್ತಕ ಓದಬೇಕು. ಜ್ಞಾನವೇ ಎಲ್ಲದಕ್ಕೂ ಮುಖ್ಯ ಎಂದು ಸಿದ್ಧಾರ್ಥ್ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಪ್ರಭು ಹೇಳಿದರು.
ನಗರದ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಶಬನಮ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಎಸ್.ಎಂ ಜನವಾಡಕರ್ ಅವರ ಬದುಕು ಬರಹ ಕುರಿತು ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್.ಎಂ ಜನವಾಡಕರ್ ಬೀದರ್ ಜಿಲ್ಲೆಯ ಹಿರಿಯ ಸಾಹಿತಿಗಳಾಗಿದ್ದಾರೆ. ಅವರನ್ನು ನೋಡಿಯೆ ನಾವು ಬೆಳೆದಿದ್ದೇವೆ. ಇಂತಹ ಸಾಹಿತಿಗಳ ಮಾಹಿತಿ ಪರಿಚಯಿಸುವ ಈ ಕಾರ್ಯಕ್ರಮ ಉತ್ತಮವಾಗಿದೆ ಎಂದರು.
ಹಿರಿಯ ಚುಟುಕು ಸಾಹಿತಿ ಪುಷ್ಪ ಕನಕ ಮಾತನಾಡಿ, ಮನುಷ್ಯನಿಗೆ ಹಾಸ್ಯ ಕೂಡ ಮುಖ್ಯವಾಗುತ್ತದೆ. ಸಾಹಿತಿಗಳು ಅವರದೆ ಆದ ಇಷ್ಟದ ಕ್ಷೇತ್ರದಲ್ಲಿ ಮುಂದುವರಿಯುತ್ತಾರೆ. ಎಸ್ ಎಂ ಜನವಾಡಕರ್ ಅವರು ಬುದ್ಧ ಸಾಹಿತ್ಯವನ್ನು ಹೆಚ್ಚು ಬರೆದಿದ್ದಾರೆ. ಅದು ಅವರ ಆಸಕ್ತಿ ಎಂದು ತಿಳಿಸಿದರು.
ಹಿರಿಯ ಸಾಹಿತಿ ಎಸ್ ಎಂ ಜನವಾಡಕರ್ ಮಾತನಾಡಿ, ಆಶಯ ನುಡಿಗಳು ನುಡಿದು ನನ್ನ ಬಗ್ಗೆ ಕಾರ್ಯಕ್ರಮ ಮಾಡುತ್ತಿರುವುದು ಸಂತೋಷದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯ ಮಾಡಲು ಇಂತಹ ಸಂದರ್ಭಗಳು ಪ್ರೋತ್ಸಾಹ ನೀಡುತ್ತವೆ. ಸಾಹಿತ್ಯದ ಕಾರ್ಯ ಮಾಡುವುದು ನನಗೆ ಖುಷಿ ಕೊಡುತ್ತದೆ ಎಂದು ಹೇಳಿದರು.
ಶಬನಮ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ. ಮಕ್ತುಂಬಿ ಎಂ ಮಾತನಾಡಿ, ಎಸ್ ಎಂ ಜನವಾಡಕರ್ ಅವರು ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡಿದ್ದಾರೆ. ಅವರ ಸಾಧನೆ ಎಲ್ಲರಿಗೂ ಪ್ರೇರಣೆ ನೀಡಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಕಥೆಗಾರ ಗುರುನಾಥ್ ಅಕ್ಕಣ್ಣಾ, ಯುವ ಸಾಹಿತಿ ಪವನ್ ಬಾಲೇರ್, ನಾಗಶಟ್ಟಪ್ಪ ಜೋತ್ಯಪ್ಪ, ಗುಂಡಪ್ಪ, ಸುಲೋಚನ, ಏಕನಾಥ್, ಪ್ರಿಯಾಂಕ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







