Bidar | ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳಿಸಲು ಅಗತ್ಯ ಕ್ರಮಕ್ಕೆ ನಾಗರಿಕ ಮತ ಕಾವಲು ಸಮಿತಿ ಆಗ್ರಹ

ಬೀದರ್: ಜಿಲ್ಲೆಯಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಅವಧಿಯು ಆಗಸ್ಟ್ 8ರಂದು ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ ಶಾಶ್ವತ ನಿವಾಸ ಪ್ರಮಾಣ ಪತ್ರ (ಪಿಆರ್‌ಸಿ) ವಿತರಣೆಗೆ ಸ್ಪಷ್ಟ ಮಾರ್ಗಸೂಚಿ ಹೊರಡಿಸಿ, ಎಸ್‌ಐಆರ್ ಡಿಜಿಟಲೀಕರಣ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕ ಮತ ಕಾವಲು ಸಮಿತಿ ಆಗ್ರಹಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಸಮಿತಿಯು, ಜಿಲ್ಲೆಯ ಪ್ರತಿ ಗ್ರಾಮ ಹಾಗೂ ವಾರ್ಡ್ ಮಟ್ಟದಲ್ಲಿ ಗ್ರಾಮಸಭೆ ಮತ್ತು ವಾರ್ಡ್ ಸಭೆಗಳನ್ನು ಆಯೋಜಿಸಿ, ಸಂಬಂಧಿತ ಅಧಿಕಾರಿಗಳಿಂದ ಗೈರು, ಸ್ಥಳಾಂತರ, ಮೃತ, ನಕಲಿ ಹಾಗೂ ಇತರೆ ಪ್ರಕರಣಗಳ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದೆ.
ಪರಿಶೀಲನೆ ಬಳಿಕ ಸಿದ್ಧವಾಗುವ ವರದಿಯನ್ನು ಸಾರ್ವಜನಿಕರ ಮುಂದಿಡುವ ಮೂಲಕ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸಾರ್ವಜನಿಕರಿಗೆ ಶಾಶ್ವತ ನಿವಾಸ ಪ್ರಮಾಣ ಪತ್ರ (ಪಿಆರ್‌ಸಿ) ಹಾಗೂ ಜಾತಿ ಪ್ರಮಾಣ ಪತ್ರಗಳನ್ನು ತ್ವರಿತವಾಗಿ ವಿತರಿಸಬೇಕು. ಅಗತ್ಯವಿದ್ದಲ್ಲಿ ಮನೆ-ಮನೆಗೆ ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ಸಮಿತಿ ಸರ್ಕಾರವನ್ನು ಆಗ್ರಹಿಸಿದೆ.
ಈ ಸಂದರ್ಭದಲ್ಲಿ ನಾಗರಿಕ ಮತ್ತು ಕಾವಲು ಸಮಿತಿಯ ಅಧ್ಯಕ್ಷ ಶ್ರೀಕಾಂತ್ ಸ್ವಾಮಿ, ಬಾಬುರಾವ್ ಹೊನ್ನಾ, ನಿಜಾಮುದ್ದಿನ್, ಮುಹಮ್ಮದ್ ಫಿರ್ದೋಸ್ ಅಲಿ, ಓಂಪ್ರಕಾಶ್ ರೊಟ್ಟೆ, ಎಂ. ಡಿ ಶಫಾಯತ್ ಅಲಿ, ಸಂತೋಷಕುಮಾರ್ ಜೋಳದಾಪಕೆ, ಜಗದೀಶ್ವರ್ ಬಿರಾದಾರ್ ಹಾಗೂ ಅಬ್ದುಲ್ ಸಮದ್ ಇದ್ದರು.






