ಬೀದರ್ | ಜಕನಾಳ್ ಗ್ರಾಮದಲ್ಲಿ ಪಡಿತರ ವಿತರಣೆಗೆ ಹಣ ವಸೂಲಿ : ಪ್ರಭು ಚವ್ಹಾಣ್ ಕಿಡಿ

ಬೀದರ್ : ಔರಾದ್ ತಾಲೂಕಿನ ಜಕನಾಳ್ ಗ್ರಾಮದಲ್ಲಿನ ನ್ಯಾಯ ಬೆಲೆ ಅಂಗಡಿಯಲ್ಲಿ ಹೆಬ್ಬೆಟ್ಟಿನ ಗುರುತು ನೀಡುವುದಕ್ಕೆ 10 ರೂ. ತೆಗೆದುಕೊಳ್ಳಲಾಗುತ್ತಿದೆ ಎಂದು ಗ್ರಾಮಸ್ಥರು ಹೇಳಿದ್ದಕ್ಕೆ, ಶಾಸಕ ಪ್ರಭು ಚೌಹಾಣ್ ಅವರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಇಂದು ಗ್ರಾಮ ಸಂಚಾರದ ನಿಮಿತ್ತ ಪ್ರಭು ಚವ್ಹಾಣ್ ಜಕನಾಳ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಒಬ್ಬೊಬ್ಬರಾಗಿ ಸಮಸ್ಯೆಗಳನ್ನು ಹೇಳಿದರು. ಪಡಿತರ ಪಡೆಯಲು ಬೇರೆ ಊರಿಗೆ ಹೋಗಬೇಕಾಗುತ್ತದೆ. ಒಂದು ದಿನ ಹೆಬ್ಬೆಟ್ಟಿನ ಗುರುತು ನೀಡಲು ಹೋದರೆ, ಮತ್ತೊಮ್ಮೆ ಪಡಿತರ ಪಡೆಯಲು ಹೋಗಬೇಕು. ತಿಂಗಳಲ್ಲಿ 2-3 ದಿನ ಮಾತ್ರ ಪಡಿತರ ವಿತರಣೆ ಮಾಡುತ್ತಿದ್ದಾರೆ. 2-3 ದಿನದ ನಂತರ ಪಡಿತರ ತೆಗೆದುಕೊಳ್ಳಲು ಹೋದರೆ ಪಡಿತರ ಸಿಗದೇ ವಾಪಸ್ಸು ಬರಬೇಕಾಗುತ್ತದೆ. ಕೂಲಿ-ನಾಲಿ ಮಾಡುವ ನಾವು ಎಲ್ಲ ಕೆಲಸ ಬಿಟ್ಟು ರೇಷನ್ಗಾಗಿ ಅಲೆದಾಡಬೇಕಾಗುತ್ತಿದೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡರು.
ಇಷ್ಟೊಂದು ಸಮಸ್ಯೆಯಿದ್ದರೂ ನೀವು ಕಣ್ಣು ಮುಚ್ಚಿ ಕುಳಿತಿದ್ದೀರಾ? ಸಂಬಂಧಪಟ್ಟವರ ವಿರುದ್ಧ ಯಾಕೆ ಕ್ರಮ ಜರುಗಿಸಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರಭು ಚವ್ಹಾಣ್ ಆಕ್ರೋಶಗೊಂಡರು.
ಇದು ಒಂದು ಊರಿನ ಸಮಸ್ಯೆ ಮಾತ್ರವಲ್ಲ. ಎಲ್ಲ ಗ್ರಾಮಗಳಲ್ಲಿ ಇದೇ ರೀತಿಯ ಪರಿಸ್ಥಿತಿಯಿದೆ. ಬಡವರಿಂದ ಹಣ ವಸೂಲಿ ಮಾಡುವುದು ಮಹಾಪಾಪ. ಆಂಥವರ ವಿರುದ್ಧ ಕೂಡಲೇ ಕಠಿಣ ಕ್ರಮವಾಗಬೇಕು. ಇಲ್ಲವಾದಲ್ಲಿ ತಮ್ಮ ವಿರುದ್ಧವೇ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಸುಂದಾಳ, ನಂದ್ಯಾಳ, ಮಾನೂರ(ಕೆ), ನಾಗಮಾರಪಳ್ಳಿ, ಕರಂಜಿ(ಕೆ), ಕರಂಜಿ(ಬಿ), ರಾಯಪಳ್ಳಿ ಹಾಗೂ ಲಿಂಗದಳ್ಳಿ ಗ್ರಾಮದಲ್ಲಿ ಸಂಚರಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರಲ್ಲದೇ, ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಗ್ರಾಮಗಳಲ್ಲಿ ರಸ್ತೆ, ಚರಂಡಿ, ಶಾಲೆಯಲ್ಲಿ ಹೆಚ್ಚುವರಿ ತರಗತಿ ಕೋಣೆಗಳು, ಸಮುದಾಯ ಭವನ ಹೀಗೆ ಅವಶ್ಯಕ ಕೆಲಸಗಳನ್ನು ಆದ್ಯತೆಗೆ ಅನುಗುಣ ಮಾಡಿಕೊಡಲಾಗುವುದೆಂದು ಭರವಸೆ ನೀಡಿದ ಅವರು, ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ್ ಪಾಟೀಲ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರ ಸುಭಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾರಾಣಿ, ಜೆಸ್ಕಾಂ ಅಧಿಕಾರಿ ರವಿ ಕಾರಬಾರಿ, ಆರೋಗ್ಯಾಧಿಕಾರಿ ಡಾ.ಗಾಯತ್ರಿ, ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ, ಕೃಷಿ ಇಲಾಖೆ ಅಧಿಕಾರಿ ಧೂಳಪ್ಪ, ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರ್ ವೆಂಕಟರಾವ್ ಶಿಂಧೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರವೀಂದ್ರ ಕಲ್ಯಾಣ, ಪಶು ಸಂಗೋಪನೆ ಇಲಾಖೆಯ ಅಧಿಕಾರಿ ಫಾಹೀಮ್ ಖುರೇಶಿ, ಸಿಡಿಪಿಓ ಎಮಲಪ್ಪಾ ಸೇರಿದಂತೆ ಗ್ರಾಮಸ್ಥರು ಹಾಗೂ ಮುಖಂಡರು ಭಾಗವಹಿಸಿದ್ದರು.







