ಬೀದರ್ | ಕ್ರಿಶ್ಚಿಯನ್ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಿಸುವಲ್ಲಿ ಸಮಾಜದ ಮುಖಂಡರು ನೆರವಾಗಬೇಕು : ಸಂಜಯ್ ಜಾಗಿರದಾರ

ಬೀದರ್ : ಇಲಾಖೆಯ ವಸತಿ ಶಾಲೆ ಹಾಗೂ ನಿಲಯಗಳಲ್ಲಿ ಕ್ರಿಶ್ಚಿಯನ್ ಸಮುದಾಯದ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಿಸುವಲ್ಲಿ ಸಮಾಜದ ಮುಖಂಡರು ನೆರವಾಗಬೇಕು ಎಂದು ಬೆಂಗಳೂರು ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಸಂಜಯ್ ಜಾಗಿರದಾರ್ ಹೇಳಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಅಲ್ಪಸಂಖಾತರ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಕಚೇರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕ್ರಿಶ್ಚಿಯನ್ ಸಮುದಾಯದ ಸಮಗ್ರ ಏಳಿಗೆ ಹಾಗೂ ವಿವಿಧ ಯೋಜನೆಗಳಾದ ಶ್ರಮಶಕ್ತಿ ಯೋಜನೆ, ಸ್ವಯಂ ಉದ್ಯೋಗ ಯೋಜನೆ, ಅರಿವು ಯೋಜನೆ, ವಿದೇಶ ವ್ಯಾಸಾಂಗ ಶಿಷ್ಯವೇತನ, ಚರ್ಚ್ ಗಳ ನವೀಕರಣ, ಸಮುದಾಯ ಭವನ, ಸ್ಮಶಾನಭೂಮಿ ಆವರಣಗೋಡೆ ಕಾಮಗಾರಿಗಳು, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಮತ್ತು ವಸತಿ ನಿಲಯಗಳಲ್ಲಿನ ದಾಖಲಾತಿ ಮತ್ತು ವಿದ್ಯಾರ್ಥಿವೇತನದ ಬಗ್ಗೆ ಸುಧೀರ್ಘವಾದ ಚರ್ಚೆ ನಡೆಸಿದ ಅವರು, ಚರ್ಚ್ ಗಳ ಅಭಿವೃದ್ದಿ ಯೋಜನೆಯ ಅನುದಾನ ಸದುಪಯೋಗವಾಗುವ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದರು.
ಇದೆ ಸಮಯದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ ಸ್ವಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗೆ ಟ್ಯಾಕ್ಸಿ ವಾಹನ ವಿತರಿಸಿದರು.
ಈ ಸಭೆಯಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲೆಯ ಕ್ರಿಶ್ಚಿಯನ್ ಸಮುದಾಯದ ಮುಖಂಡರು ಹಾಗೂ ಸಂಘ ಸಂಸ್ಥೆಯ ಮುಖ್ಯಸ್ಥರು ಸೇರಿದಂತೆ ಇತರರು ಉಪಸ್ಥಿತರಿದ್ದರು.





