Bidar | ಕಾಡುಹಂದಿ ದಾಳಿಗೆ ಮೃತಪಟ್ಟ ರೈತ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಚೆಕ್ ವಿತರಣೆ

ಬೀದರ್ : ಭಾಲ್ಕಿ ತಾಲೂಕಿನ ಆನಂದವಾಡಿ ಗ್ರಾಮದಲ್ಲಿ ಕಾಡುಹಂದಿ ದಾಳಿಯಿಂದ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ರೈತ ಚನ್ನಬಸಪ್ಪ ಭೂರೇ ಅವರ ಕುಟುಂಬಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಸೋಮವಾರ 20 ಲಕ್ಷ ಪರಿಹಾರದ ಚೆಕ್ ಹಸ್ತಾಂತರಿಸಿದರು.
ಮೃತ ರೈತನ ನಿವಾಸಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಸಚಿವರು, ಅರಣ್ಯ ಇಲಾಖೆಯಿಂದ ಮಂಜೂರಾದ ಪರಿಹಾರದ ಚೆಕ್‌ನ್ನು ಕುಟುಂಬಕ್ಕೆ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ಪರಿಹಾರದಿಂದ ಕಳೆದುಹೋದ ಜೀವವನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ ದುಃಖದಲ್ಲಿರುವ ಕುಟುಂಬಕ್ಕೆ ಸರ್ಕಾರದ ನೆರವು ಆಸರೆಯಾಗಲಿದೆ. ಸಂಕಷ್ಟದ ಸಮಯದಲ್ಲಿ ಸರ್ಕಾರ ಕುಟುಂಬದೊಂದಿಗೆ ನಿಂತಿದೆ ಎಂದು ಹೇಳಿದರು.
ಕಾಡುಪ್ರಾಣಿಗಳ ದಾಳಿಯಿಂದ ರೈತರು ಹಾಗೂ ಗ್ರಾಮೀಣ ಜನರಿಗೆ ಆಗುತ್ತಿರುವ ತೊಂದರೆಗಳನ್ನು ತಡೆಯಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ಹಾವಳಿ ನಿಯಂತ್ರಿಸಿ ರೈತರ ಸುರಕ್ಷತೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ್ ರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಕಾಂತ್ ಹೇಮ್ಮಾ, ವಲಯ ಅರಣ್ಯಾಧಿಕಾರಿ ಸಚಿನ್ ಪಾಟೀಲ್, ಉಪ ವಲಯ ಅರಣ್ಯಾಧಿಕಾರಿ ಶಾಂತಕುಮಾರ್ ಪಾಟೀಲ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು, ಸ್ಥಳೀಯ ಮುಖಂಡರು, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.






