ಬೀದರ್ | ಜಮಾಬಂದಿ ಮಾಡದ ತುಗಾಂವ್ (ಹೆಚ್) ಗ್ರಾಮ ಪಂಚಾಯತ್ ಪಿಡಿಒ ವಿರುದ್ಧ ದೂರು

ಬೀದರ್ : ಭಾಲ್ಕಿ ತಾಲ್ಲೂಕಿನ ತುಗಾಂವ್ (ಹೆಚ್) ಗ್ರಾಮ ಪಂಚಾಯತಿಯಲ್ಲಿ ಸರ್ಕಾರದ ನಿರ್ದೇಶನದಂತೆ 2022-23 ಹಾಗೂ 2023-24 ನೇ ಸಾಲಿನ ಜಮಾಬಂದಿ ಕಾರ್ಯಕ್ರಮ ಮಾಡಲಿಲ್ಲ ಎಂದು ನಿತಿನ್ ಗಾಯಕವಾಡ್ ಅವರು ದೂರಿದ್ದಾರೆ.
ಇಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳಲ್ಲಿ ವಾರ ಪತ್ರಿಕೆ, ದಿನ ಪತ್ರಿಕೆ ಹಾಗೂ ಕರ ಪತ್ರ ಹಾಗೂ ಡಂಗುರ ಸಾರುವ ಮೂಲಕ ಪ್ರಚಾರ ಮಾಡಿ ಸಾರ್ವಜನಿಕರ ಎದುರಲ್ಲೆ ಜಮಾಬಂದಿ ಕಾರ್ಯಕ್ರಮ ನಡೆಸುವಂತೆ ಸರಕಾರ ಆದೇಶ ತಿಳಿಸುತ್ತದೆ. ಆದರೆ ತುಗಾಂವ್ (ಹೆಚ್) ಗ್ರಾಮ ಪಂಚಾಯತಿಯಲ್ಲಿ ನಡೆಯಬೇಕಿದ್ದ ಜಮಾಬಂದಿ ಕಾರ್ಯಕ್ರಮವನ್ನು ನಡೆಸಲಿಲ್ಲ ಎಂದು ತಿಳಿಸಲಾಗಿದೆ.
ಸದರಿ ಜಮಾಬಂದಿ ಕಾರ್ಯಕ್ರಮವು ಪ್ರತಿ ವರ್ಷ ಆಗಷ್ಟ್ ತಿಂಗಳ 16 ರಿಂದ ಸಪ್ಟೆಂಬರ್ ತಿಂಗಳ 15 ರ ಒಳಗಾಗಿ ನಡೆಸುವಂತೆ ನಿರ್ದೇಶನ ಇದ್ದರೂ ಕೂಡ, ಇಲ್ಲಿವರೆಗೆ ಯಾವುದೇ ರೀತಿಯ ಜಮಾಬಂದಿ ಕಾರ್ಯಕ್ರಮ ನಡೆದಿಲ್ಲ ಎನ್ನಲಾಗಿದೆ.
ಪಂಚಾಯತಿ ಅಭಿವೃದ್ಧಿ ಅಧಿಕಾರಿಯು ಜಮಾಬಂದಿ ಮಾಡದೇ ಸರಕಾರದ ಹಣ ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಹಾಗಾಗಿ ಇವರ ವಿರುದ್ಧ ಶಿಸ್ತಿನ ಕಾನೂನು ಕ್ರಮಕೈಗೊಳ್ಳಬೇಕು. ಹಾಗೆಯೇ ಕೂಡಲೇ ನೋಡಲ್ ಅಧಿಕಾರಿಯನ್ನು ನೇಮಿಸಿ ಸಾರ್ವಜನಿಕರ ಸಮ್ಮುಖದಲ್ಲೆ ಜಮಾಬಂದಿ ಮಾಡಿಸಬೇಕು ಎಂದು ಒತ್ತಾಯಿಸಲಾಗಿದೆ.







