ಬೀದರ್ | ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾಮಗಾರಿ ಬೇಗ ಪೂರ್ಣಗೊಳಿಸಿ : ಸೋಮಣ್ಣ ಬೇವಿನಮರದ

ಬೀದರ್ : ಗಡಿ ಪ್ರಾಧಿಕಾರದಿಂದ ಜಿಲ್ಲೆಗೆ ಬಿಡುಗಡೆ ಮಾಡಲಾದ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಕೂಡಲೆ ಪೂರ್ಣಗೊಳಿಸಿ, ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಸೂಚಿಸಿದರು.
ಇಂದು ಜಿಲ್ಲಾಧಿಕಾರಿ ಕಚೇರಿಯ ಸಭೆಯಲ್ಲಿ ಮಾತನಾಡಿದ ಅವರು, 2010-11ನೇ ಸಾಲಿನ ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದ್ದರೂ, ಹಣ ಬಳಕೆ ಪ್ರಮಾಣ ಪತ್ರ ಬಂದಿರುವುದಿಲ್ಲ. ಇನ್ನು ಕೆಲವು ಕಡೆ ಅನುದಾನ ನೀಡಿದರೂ, ಸಹ ಕಾಮಗಾರಿ ಪ್ರಾರಂಭಿಸಿಲ್ಲ. ಇಲ್ಲಿ ಕಾಮಗಾರಿಯ ಅವಶ್ಯಕತೆ ಇಲ್ಲದಿದ್ದರೆ ಅಗತ್ಯವಿರುವ ಕಡೆ ಈ ಅನುದಾನ ಬಳಸಿಕೊಳ್ಳಲಾಗುವುದು ಎಂದರು.
ರಾಜ್ಯದ 6 ಗಡಿಭಾಗಗಳು ಹೊರ ರಾಜ್ಯದ ಕನ್ನಡ ಪರ ಸಂಘ ಸಂಸ್ಥೆಗಳಿಗೆ ಭಾಷಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು ಹಾಗೂ ಗಡಿ ಭಾಗದ ಕನ್ನಡ ಮಾಧ್ಯಮ ಶಾಲೆಗಳ ಮೂಲಭೂತ ಸೌಕರ್ಯಗಳಾದ ಶಾಲಾ ಕೊಠಡಿ, ಗ್ರಂಥಾಲಯ, ಕ್ರೀಡಾ ಕೊಠಡಿ, ಶಾಲಾ ಕಂಪೌಂಡ್, ಶುದ್ದ ಕುಡಿಯುವ ನೀರಿನ ಘಟಕ, ಪಠ್ಯ ಪುಸ್ತಕಗಳು, ರಸ್ತೆಗಳು, ಸಾಂಸ್ಕೃತಿಕ ಭವನ ಸೇರಿದಂತೆ ಇತ್ಯಾದಿ ಸೌಲಭ್ಯಗಳನ್ನು ಪ್ರಾಧಿಕಾರದಿಂದ ಒದಗಿಸಲಾಗುತ್ತಿದೆ.
2010-11ನೇ ಸಾಲಿನಿಂದ ಇದುವರೆಗೆ 24 ಕೋಟಿ 33 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಇದರಲ್ಲಿ 15 ಕೋಟಿ 91 ಲಕ್ಷ ರೂ. ಹಣ ಬಳಕೆ ಪ್ರಮಾಣ ಪತ್ರ ಬಂದಿದೆ. ಉಳಿದ 8 ಕೋಟಿ 41 ಲಕ್ಷ ರೂ. ಬಾಕಿ ಉಳಿದಿದೆ. ಈ ಬಾಕಿ ಉಳಿದ ಮೊತ್ತಕ್ಕೆ ಕೂಡಲೇ ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಅಪರ್ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ್, ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜೀವಕುಮಾರ್ ಅತಿವಾಳ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಶಿವಶಂಕರ್, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ್ ಶಿಂಧೆ ಹಾಗೂ ಕೆಕೆಐಡಿಎಲ್, ಪಂಚಾಯತ್ ರಾಜ್ ಇಂಜಿನೀಯರಿಂಗ್ ವಿಭಾಗ ಮತ್ತು ನಿರ್ಮಿತಿ ಕೇಂದ್ರದ ಇಇ ಸೇರಿದಂತೆ ಇತರ ಅಧಿಕಾರಿ ಉಪಸ್ಥಿತರಿದ್ದರು.







