ಬೀದರ್ | ದೇಶದ ಸ್ವಾತಂತ್ರ್ಯಕ್ಕೆ ಕಾಂಗ್ರೆಸ್ ಕೊಡುಗೆ ಅಪಾರ : ಮಾಜಿ ಸಚಿವ ರಾಜಶೇಖರ ಪಾಟೀಲ್

ಬೀದರ್ : ಭಾತರ ದೇಶದ ಸ್ವಾತಂತ್ರ್ಯಕ್ಕೆ ಹಾಗೂ ದೇಶದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷದ ನಾಯಕರು ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಅವರು ಹೇಳಿದರು.
ಇಂದು ಹುಮನಾಬಾದ್ ಪಟ್ಟಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಸಂವಿಧಾನ ರಕ್ಷಿಸಿ ಪ್ರಜಾಪ್ರಭುತ್ವ ಉಳಿಸಿ ಪಥ ಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ನೆಹರು, ಸರ್ದಾರ್ ವಲ್ಲಭಭಾಯಿ, ಇಂದಿರಾ ಗಾಂಧಿ ಹೀಗೆ ಅನೇಕ ಮಹನೀಯರು ತಮ್ಮ ಪ್ರಾಣದ ಹಂಗು ತೊರೆದು ದೇಶದ ಬೆಳವಣಿಗೆಗೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಇಂದಿನ ಯುವ ಪೀಳಿಗೆಗಳು ಕಾಂಗ್ರೆಸ್ ಕೊಡುಗೆಯ ಬಗ್ಗೆ ಅರಿತುಕೊಂಡ ಸಂವಿಧಾನ ರಕ್ಷಣೆಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ರಾಜ್ಯ ಸರಕಾರದಿಂದ ವಿಧಾನ ಸಭಾ ಕ್ಷೇತ್ರಗಳ ಅಭಿವೃದ್ಧಿಗೆ 20 ಕೋಟಿ ರೂ. ಅನುದಾನ ಬರುತ್ತಿತ್ತು. ಆದರೆ ಇದೀಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ವಿಧಾನ ಸಭಾ ಕ್ಷೇತ್ರಗಳಿಗೆ 80 ಕೋಟಿ ರೂ. ಗೂ ಹೆಚ್ಚಿನ ಅನುದಾನ ಬರುತ್ತಿದೆ. ಹುಮನಾಬಾದ್ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಮೇಲೆ ಜನಸಾಮಾನ್ಯರು ಕೂಡಾ ಗಮನ ಹರಿಸಬೇಕು ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಫ್ಸರಮಿಯ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಓಂಕಾರ್ ತುಂಬಾ, ಯುವ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ಜಮಗಿ, ಪ್ರಮುಖರಾದ ಲಕ್ಷ್ಮಣರಾವ್ ಬುಳ್ಳಾ, ಸಂಭಾಜಿ ಪಾಟೀಲ್, ರಮೇಶ್ ಡಾಕುಳಗಿ, ಬಾಬು ಟೈಗರ್, ಶ್ರೀಮಂತ್ ಪಾಟೀಲ್, ಉಮೇಶ್ ಕುಲಕರ್ಣಿ, ಕೇಶವರಾವ್ ತಳಘಟ್ಕರ್, ಕೇಶಪ್ಪ ಬಿರಾದಾರ್, ಸೈಯದ್ ಯಾಸೀನ್, ಜೈರಾಜ್ ವೈದ್ಯ, ಶಿವಕುಮಾರ್ ಬೆಳಕೇರಾ, ವಿಜಯಕುಮಾರ್ ನಾತೆ, ಸುರೇಶ್ ಘಾಂಗ್ರೆ ಹಾಗೂ ಸಚೀನ್ ಕಲ್ಲೂರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







