ಬೀದರ್ | ಒಳ ಮೀಸಲಾತಿ ಸಮೀಕ್ಷೆಯಲ್ಲಿನ ಲೋಪದೋಷ ಸರಿಪಡಿಸಿ : ಪಿಂಟು ಕಾಂಬಳೆ

ಬೀದರ್ : ಪರಿಶಿಷ್ಟ ಜಾತಿ ಸಮೀಕ್ಷೆಯ ಗಣತಿ ತಂತ್ರಾಂಶದಲ್ಲಿ ಲೋಪದೋಷಗಳಿದ್ದು, ಕಡಿಮೆ ವೇಗದ ನೆಟ್ ಬಳಸಿ ಸಮೀಕ್ಷೆ ಮಾಡುವುದಕ್ಕೆ ಸಮಯ ಹಿಡಿಯುತ್ತಿದೆ. ಅದನ್ನು ಸರಿಪಡಿಸಿ ವೇಗದ ನೆಟ್ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಅನೇಕ ಮನೆಗಳ ಸದಸ್ಯರು ಗಣತಿಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಬಸವಕಲ್ಯಾಣ ತಾಲ್ಲೂಕು ಸಂಚಾಲಕ ಪಿಂಟು ಕಾಂಬಳೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಣತಿ ಕಾರ್ಯವನ್ನು ಮೊಬೈಲ್ ಆ್ಯಪ್ ಮೂಲಕ ಮಾಡಲಾಗುತ್ತಿದ್ದು, ಆ ಆ್ಯಪ್‌ನಲ್ಲಿ ತಾಂತ್ರಿಕ ದೋಷಗಳಿವೆ. ವೇಗದ ಇಂಟರ್ನೆಟ್ ಇರದ ಕಾರಣ ಗಣತಿದಾರರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಇದನ್ನು ಸರಿಪಡಿಸಬೇಕು ಎಂದು ಹೇಳಿದ್ದಾರೆ.
ಸಮಗ್ರ ಮಾಹಿತಿಯನ್ನು ಪಡಿತರ ಚೀಟಿಯ ಆಧಾರದ ಮೇಲೆ ನಮೂದಿಸುವುದು ಸರಿಯಲ್ಲ. ರಾಜ್ಯದಲ್ಲಿ ಅನೇಕರು ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅವರ ಹೆಸರು ಪಡಿತರ ಚೀಟಿಯಿಂದ ತೆಗೆಯಲಾಗಿದೆ. ಸಮೀಕ್ಷೆ ಮಾಡುವಾಗ ಮೊಬೈಲ್ ಆ್ಯಪ್‌ನಲ್ಲಿ ಪಡಿತರ ಚೀಟಿಯಲ್ಲಿ ಹೆಸರು ಇರದವರ ಕೇವಲ ಇಬ್ಬರು ಸದಸ್ಯರ ಹೆಸರು ಮಾತ್ರ ಸೇರಿಸಬಹುದು ಎಂದು ಸಮೀಕ್ಷೆದಾರರು ಹೇಳುತ್ತಿದ್ದಾರೆ. ಹಾಗೆಯೇ ಅನೇಕ ಜನರ ಜಾತಿ ಪ್ರಮಾಣ ಪತ್ರಗಳು ಅವರ ಪಡಿತರ ಚೀಟಿಗಳಿಗೆ ಲಿಂಕ್ ಇಲ್ಲ. ಇದರಿಂದಾಗಿ ಸಮೀಕ್ಷೆಯ ಆ್ಯಪ್‌ನಲ್ಲಿ ಅವರ ಜಾತಿ ಹೆಸರು ತೋರಿಸುತ್ತಿಲ್ಲ. ಇಂತಹ ಅನೇಕ ಲೋಪದೋಷಗಳಿದ್ದು, ಅವುಗಳನ್ನು ಸರಿಪಡಿಸಿ ಸಮೀಕ್ಷೆ ನಡೆಸಿದಾಗ ಮಾತ್ರ ಇದು ವೈಜ್ಞಾನಿಕ ಜಾತಿ ಸಮೀಕ್ಷೆ ಮಾಡಿದಂತೆ ಆಗುತ್ತದೆ. ಇಲ್ಲದಿದ್ದರೆ ಬಹಳಷ್ಟು ಕುಟುಂಬಗಳು ಈ ಸಮೀಕ್ಷೆಯಿಂದ ಹೊರಗುಳಿಯುತ್ತವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಸರ್ಕಾರ ತಕ್ಷಣವೇ ಜಾತಿಗಣತಿ ಸಮೀಕ್ಷೆಯ ಮೊಬೈಲ್ ಆ್ಯಪ್‌ನಲ್ಲಿರುವ ಲೋಪದೋಷಗಳನ್ನು ಸರಿಪಡಿಸಬೇಕು. ವೇಗದ ನೆಟ್ ವ್ಯವಸ್ಥೆ ಮಾಡಬೇಕು. ಹಾಗೆಯೇ ಪಡಿತರ ಚೀಟಿಯಲ್ಲಿನ ವಿವರಗಳ ಆಧಾರದ ಮೇಲೆ ಜಾತಿ ಸಮೀಕ್ಷೆ ಮಾಡುವುದನ್ನು ಕೈಬಿಟ್ಟು ಇತರ ದಾಖಲೆಗಳ ಆಧಾರದ ಮೇಲೆ ಜಾತಿ ಗಣತಿ ನಡೆಯುವಂತೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.







