ಬೀದರ್ | ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ಆರೋಪ: ಬಿಜೆಪಿಯಿಂದ ಪ್ರತಿಭಟನೆ

ಬೀದರ್ : ಜಿಲ್ಲೆಯ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಬೀದರ್ ನಗರ ಮಂಡಲದಿಂದ ಮಹಾನಗರ ಪಾಲಿಕೆ ಎದುರಿಗೆ ಪ್ರತಿಭಟನೆ ನಡೆಸಲಾಯಿತು.
ಪಾಲಿಕೆಯ ಆಡಳಿತದಲ್ಲಿ ಪಾರದರ್ಶಕತೆ ಕುಸಿದಿದ್ದು, ಜನಧನವನ್ನು ದುರುಪಯೋಗ ಮಾಡಲಾಗಿದೆ. ರುದ್ರಭೂಮಿಯಲ್ಲಿ ಚಿತಾಗಾರ ಯಂತ್ರ ಅಳವಡಿಕೆ, ಬೀದಿ ದೀಪ ಅಳವಡಿಕೆ, ಪೌರ ಕಾರ್ಮಿಕರ ನೇಮಕಾತಿ ಮತ್ತು ಬಾಡಿಗೆ ವಾಹನಗಳ ನಿರ್ವಹಣೆ ಸೇರಿದಂತೆ ಹಲವು ವಿಭಾಗಗಳಲ್ಲಿ ಅನಿಯಮಿತತೆ ಕಾಣಿಸಿಕೊಂಡಿವೆ ಎಂದು ಆರೋಪಿಸಲಾಗಿವೆ.
ನಗರದ ಪ್ರಮುಖ ರಸ್ತೆಗಳು ಹಾಳಾಗಿದ್ದು, ರಸ್ತೆ ಗುಂಡಿಗಳು ಹೆಚ್ಚಳಗೊಂಡಿವೆ. ಮೂಲಭೂತ ಸೌಕರ್ಯಗಳ ಕೊರತೆ ನಾಗರಿಕರಲ್ಲಿ ಅಸಮಾಧಾನ ಉಂಟುಮಾಡಿದೆ. ನಾಗರಿಕರಿಗೆ ತೊಂದರೆ ಉಂಟಾಗುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ ಮತ್ತು ಮಹಾನಗರ ಪಾಲಿಕೆ ಕಣ್ಮುಚ್ಚಿದಂತೆ ವರ್ತಿಸುತ್ತಿವೆ. ಪ್ರಶ್ನೆ ಕೇಳಿದರೆ ಭಯ ಹುಟ್ಟಿಸುವ ಸಂಸ್ಕೃತಿ ಬೆಳೆವುದೇ ದುಃಖಕರ. ಜನರ ಧ್ವನಿಯನ್ನೂ, ಜನರ ಹಣವನ್ನೂ ಗೌರವಿಸದ ಆಡಳಿತ ಎಷ್ಟು ಕಾಲ ಮುಂದುವರಿಯುತ್ತದೆ ಎಂದು ಪ್ರಶ್ನಿಸಲಾಗಿದೆ.
ಗ್ಯಾರಂಟಿಗಳ ಹೆಸರಿನಲ್ಲಿ ಜನಮನ ಗೆಲ್ಲುವ ರಾಜಕೀಯ ನಡೆಯುತ್ತಿದೆಯಾದರೂ, ಅದರ ಜವಾಬ್ದಾರಿಯುತ ಜಾರಿ ನಡೆಯುತ್ತಿಲ್ಲ. ರಾಜ್ಯದ ಸಮಗ್ರ ಹಿತಕ್ಕಾಗಿ ಮುಖ್ಯಮಂತ್ರಿ ಸೇರಿದಂತೆ ಸಂಬಂಧಿತ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್, ಮಾಜಿ ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ನಗರ ಮಂಡಲ ಅಧ್ಯಕ್ಷ ಶಶಿಧರ್ ಹೊಸಳ್ಳಿ, ಮಾಜಿ ಬುಡಾ ಅಧ್ಯಕ್ಷ ಬಾಬು ವಾಲಿ, ಗುರುನಾಥ್ ಜಾಂತಿಕರ್, ಪೀರಪ್ಪ ಔರಾದೆ, ಉಲ್ಲಾಸಿನಿ ಮುದ್ದಾಳೆ, ರೇವಣಸಿದ್ದಪ್ಪ ಜಲಾದೆ, ರಾಜಶೇಖರ್ ನಾಗಮೂರ್ತಿ, ಬಾಬುರಾವ್ ಕಾರಬಾರಿ, ಸುಭಾಷ್ ಮಡಿವಾಳ್, ರಾಜಕುಮಾರ್ ಚಿದ್ರಿ, ದೀಪಕ್ ಗಾದಗೆ, ಮಹೇಶ್ವರ್ ಸ್ವಾಮಿ, ರಾಜೇಂದ್ರ ಪೂಜಾರಿ, ಪ್ರಭುಶೆಟ್ಟಿ ಪ್ರಧಾನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







