Bidar | ಏಕತೆ ಇಲ್ಲದ ದೇಶ ಬಲಹೀನವಾಗುತ್ತದೆ : ಮೌಲಾನಾ ಹಾಮಿದ್ ಮುಹಮ್ಮದ್ ಖಾನ್

ಬೀದರ್ : ವೈವಿಧ್ಯದಲ್ಲಿ ಏಕತೆ ಭಾರತದ ನಿಜವಾದ ಶಕ್ತಿಯಾಗಿದ್ದು, ಒಗ್ಗಟ್ಟಿನಲ್ಲಿ ಬಲವಿದೆ. ಏಕತೆ ಇಲ್ಲದ ದೇಶ ಬಲಹೀನವಾಗುತ್ತದೆ ಎಂದು ಜಮಾಅತೆ ಇಸ್ಲಾಮಿ ಹಿಂದ್‌ನ ಕೇಂದ್ರದ ನಾಯಕ ಮೌಲಾನಾ ಹಾಮಿದ್ ಮುಹಮ್ಮದ್ ಖಾನ್ ಹೇಳಿದರು.
ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಬುಧವಾರ ಸಂಜೆ ಜಮಾಅತೆ ಇಸ್ಲಾಮಿ ಹಿಂದ್, ಸದ್ಭಾವನಾ ಮಂಚ್ ಹಾಗೂ ರಾಬ್ತಾ ಎ ಮಿಲ್ಲತ್ ಸಹಯೋಗದಲ್ಲಿ ರಮಝಾನ್ ಅಂಗವಾಗಿ ಆಯೋಜಿಸಿದ್ದ ಈದ್ ಸ್ನೇಹಕೂಟದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕು. ಅದರಿಂದಲೇ ದೇಶ ಸದೃಢವಾಗುತ್ತದೆ” ಎಂದು ಹೇಳಿದರು.
ಸಮೃದ್ಧಿ ಅಲ್ಲಾಹನ ಗುಣವಿಶೇಷವಾಗಿದ್ದು, ಕುರ್‌ಆನ್ ಸಮೃದ್ಧಿಯ ಗ್ರಂಥವಾಗಿದ್ದರೆ, ಪವಿತ್ರ ರಮಝಾನ್ ಸಮೃದ್ಧಿಯ ಮಾಸವಾಗಿದೆ. ಇಸ್ಲಾಂ ಮೌಲ್ಯಗಳನ್ನು ಅನುಸರಿಸಿ ಸಂತೋಷವನ್ನು ಹಂಚಿಕೊಳ್ಳುವುದೇ ಈದ್ ಹಬ್ಬದ ಮಹತ್ವ ಎಂದು ವಿವರಿಸಿದರು.
ಬಸವ ಗಂಗೋತ್ರಿ ಜ್ಞಾನ ಪೀಠಾಧ್ಯಕ್ಷ ಡಾ.ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ನಮ್ಮೆಲ್ಲರ ಸೃಷ್ಟಿಕರ್ತ ಒಬ್ಬನೇ. ನಾವು ಅವನನ್ನೇ ಆರಾಧಿಸಬೇಕು. ಮಾನವೀಯತೆ ಹಾಗೂ ಪರಧರ್ಮ ಸಹಿಷ್ಣುತೆ ಬೆಳೆಸಿಕೊಳ್ಳಬೇಕು ಎಂದರು. ಪರರ ಧರ್ಮವನ್ನು ಗೌರವಿಸುವ ಮನೋಭಾವ ಸಮಾಜದಲ್ಲಿ ಶಾಂತಿ ತರಲಿದೆ ಎಂದು ತಿಳಿಸಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯದ ಪ್ರತಿಮಾ ಬಹೆನ್‌ಜಿ ಅವರು, ಪರಸ್ಪರ ಪ್ರೀತಿ ಮತ್ತು ಗೌರವದಿಂದ ಮಾತ್ರ ಸಮಾಜದಲ್ಲಿ ಸಾಮರಸ್ಯ ನೆಲೆಗೊಳ್ಳುತ್ತದೆ ಎಂದು ಹೇಳಿದರು.
ಸೇಂಟ್ ಪೌಲ್ ಮೆಥೋಡಿಸ್ಟ್ ಚರ್ಚ್ ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ಡಿಸೋಜಾ ಥಾಮಸ್ ಮಾತನಾಡಿ, ಪರಸ್ಪರರ ಸುಖ-ದುಃಖಗಳಲ್ಲಿ ಭಾಗಿಯಾಗುವುದು ಮಾನವೀಯ ಮೌಲ್ಯಗಳ ಪ್ರತಿಬಿಂಬವಾಗಿದೆ ಎಂದು ಅಭಿಪ್ರಾಯಪಟ್ಟರು.
ಜಮೀಯತ್ ಉಲೆಮಾ ಏ ಹಿಂದ್ ಜಿಲ್ಲಾ ಅಧ್ಯಕ್ಷ ಮೌಲಾನಾ ಅಬ್ದುಲ್ ಗನಿ ಖಾನ್ ಅವರು, ಇಸ್ಲಾಂ ಶಾಂತಿಯ ಧರ್ಮವಾಗಿದ್ದು, ಎಲ್ಲರೂ ಸೃಷ್ಟಿಕರ್ತನ ದಾರಿಯಲ್ಲಿ ನಡೆಯಬೇಕು ಎಂದು ಹೇಳಿದರು.
ಈ ವೇಳೆ ಜಗಜೀತಸಿಂಗ್ ಸಿಲೇದಾರ್, ಭಂತೆ ಜ್ಞಾನಸಾಗರ್, ಮೌಲ್ವಿ ಮುಹಮ್ಮದ್ ಫಹೀಮುದ್ದೀನ್ ಮಾತನಾಡಿದರು.
ಈ ಸಂದರ್ಭದಲ್ಲಿ ಫಾದರ್ ಕ್ಲೇರಿ ಡಿಸೋಜಾ, ಮಹಾನಗರ ಪಾಲಿಕೆಯ ಮಹಾಪೌರ ಮುಹಮ್ಮದ್ ಗೌಸ್, ಡಾ.ಸೈಯದ್ ಹುಸಾಮುದ್ದೀನ್, ಉಝೇರ್, ಶ್ರೀಕಾಂತ್ ಸ್ವಾಮಿ, ಷಣ್ಮುಕಯ್ಯ ಬಿ. ಸ್ವಾಮಿ, ಮುಹಮ್ಮದ್ ಮೌಅಝಂ, ಡಾ.ಸಂಜೀವಕುಮಾರ್ ಅತಿವಾಳೆ, ಮುಹಮ್ಮದ್ ಆಸಿಫುದ್ದೀನ್, ಡಾ.ವಿಜಯ್ ಬಲ್ಲೂರಕರ್, ಇಕ್ಬಾಲ್ ಗಾಜಿ, ತೌಹೀದ್ ಸಿಂಧೆ, ಡಾ. ರಾಜಶೇಖರ್ ಸೇಡಂಕರ್, ಮುಹಮ್ಮದ್ ಜಾವೀದ್, ಸೈಯದ್ ಮುಬಸ್ಸಿರ್ ಅಲಿ ಅಬ್ಬು, ಪಿ.ಟಿ. ಶಾಮು ಪುಷ್ನಾಕೆ, ಅಸ್ಮಾ ಸುಲ್ತಾನಾ, ಡಾ. ಬುಶ್ರಾ ಐಮನ್, ಮುಹಮ್ಮದ್ ಜೋಹರ್ ಕಾಷಿಪ್, ಸೈಯದ್ ಇಝಾನ್ ಅಹ್ಮದ್, ಅಜೀಜ್ ಖಾನ್, ಅಷ್ಫಾಕ್ ಅಹ್ಮದ್, ಡಾ. ದೀಪಾ ನಂದಿ, ಡಾ. ಅಬ್ದುಲ್ ಖದೀರ್, ಬಿಲ್ಕಿಸ್ ಫಾತಿಮಾ, ಹಾಫಿಜ್ ಸೈಯದ್ ಅತೀಕುಲ್ಲಾ ಹಾಗೂ ಸಿರಾಜ್ ನೆಲವಾಡಕರ್ ಸೇರಿದಂತೆ ಇತರರು ಇದ್ದರು. ಸದ್ಭಾವನಾ ಮಂಚ್ ನ ಸಂಚಾಲಕ ಗುರುನಾಥ್ ಗಡ್ಡೆ ಸ್ವಾಗತಿಸಿದರು. ನಿವೃತ್ತ ಪ್ರಾಚಾರ್ಯ ಮುಹಮ್ಮದ್ ನಿಜಾಮುದ್ದೀನ್ ನಿರೂಪಿಸಿದರು. ಜಮಾಅತೆ ಇಸ್ಲಾಮಿ ಹಿಂದ್ ನ ಸ್ಥಳೀಯ ಘಟಕದ ಅಧ್ಯಕ್ಷ ಮುಹಮ್ಮದ್ ಆರಿಫುದ್ದೀನ್ ವಂದಿಸಿದರು.







