Bidar | ಬೆಲೆ ಏರಿಕೆ ವಿರೋಧಿಸಿ ಸಿಪಿಐ(ಎಂ) ನಿಂದ ಪ್ರತಿಭಟನೆ

ಬೀದರ್: ದೇಶದಲ್ಲಿ ಆಗುತ್ತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಸಿಪಿಐ(ಎಂ) ಪಕ್ಷದ ವತಿಯಿಂದ ಹುಮನಾಬಾದ್ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಹುಮನಾಬಾದ್ ನಗರದ ಅಂಬೇಡ್ಕರ್ ವೃತ್ತದಲ್ಲಿ ಸಿಪಿಐ(ಎಂ) ಪಕ್ಷದ ಕಾರ್ಯಕರ್ತರು ಜಮಾವಣೆಗೊಂಡು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳು ಕೂಗಿದರು.
ಈ ವೇಳೆ ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಅಂಬುಬಾಯಿ ಮಾಳಗೆ ಅವರು ಮಾತನಾಡಿ, ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗುತ್ತಿದೆ. ಒಂದು ತಿಂಗಳಲ್ಲಿ ನಾಲ್ಕರು ಸಲ ಬೆಲೆ ಏರಿಕೆ ಮಾಡಲಾಗುತ್ತಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ಸಿಎನ್‌ಜಿ ಸೇರಿದಂತೆ ಮೂಲಭೂತ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ. ಆದರೆ, ಜನರ ಕೂಲಿ ಹಣವನ್ನು ಹೆಚ್ಚು ಮಾಡುತ್ತಿಲ್ಲ ಎಂದು ಆರೋಪಿಸಿದರು.
ಜೋಳ, ಅಕ್ಕಿ, ಬೇಳೆ ಸೇರಿದಂತೆ ಎಲ್ಲವುಗಳ ಬೆಲೆ ಹೆಚ್ಚಾಗಿದೆ. ಇದರಿಂದ ಬಡವರ ಬದುಕು ದುಸ್ಥಿರವಾಗಿದೆ. ಕೇಂದ್ರ ಸರ್ಕಾರ ವಾರದಿಂದ ವಾರಕ್ಕೆ ವಸ್ತುಗಳ ಬೆಲೆ ಹೆಚ್ಚು ಮಾಡುತ್ತಿದೆ. ಇದನ್ನು ನಾವು ವಿರೋಧಿಸುತ್ತೇವೆ. ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ ಎಂದು ಅವರು ಎಚ್ಚರಿಸಿದರು.
ಶಶಿಕಾಂತ್ ಡಾಂಗೆ ಅವರು ಮಾತನಾಡಿ, ಅನೇಕ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ತಕ್ಷಣ ಗ್ಯಾಸ್ ಉಚಿತವಾಗಿ ನೀಡುತ್ತೇವೆ ಎಂದು ಹೇಳಿದ್ದರು. ಆದರೆ ಇದೀಗ ಒಂದು ಗ್ಯಾಸ್ ಸಿಲಿಂಡರ್ ಬೆಲೆ 600 ರೂ. ಇದ್ದಿದ್ದು 1,000ಕ್ಕಿಂತ ಹೆಚ್ಚಾಗಿದೆ. ಅದೇ ರೀತಿ ಪೆಟ್ರೋಲ್, ಡೀಸೆಲ್ ಬೆಲೆ ಕೂಡ ಹೆಚ್ಚಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಇದೀಗ ನರೇಂದ್ರ ಮೋದಿಯವರು ಮನೆಯಿಂದ ಹೊರಬರಬೇಡಿ, ವಾಹನಗಳ ಬಳಕೆ ಕಡಿಮೆ ಮಾಡಿ ಎಂದು ಹೇಳುತ್ತಾರೆ. ಆದರೆ ಅವರೇ ಹೊರದೇಶಕ್ಕೆ ಹೊರಟು ಓಡಾಡಿ ಬರುತ್ತಿದ್ದಾರೆ. ಅವರು ಹೊರದೇಶಕ್ಕೆ ಓಡಾಡುವಾಗ ಇಲ್ಲಿ ವಸ್ತುಗಳ ಬೆಲೆ ಹೆಚ್ಚಾಗಿದ್ದು ಅವರಿಗೆ ಕಾಣುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ನರೇಂದ್ರ ಮೋದಿ ಅವರು ಯುವಕರಿಗಾಗಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರು. ಆದರೆ, ಒಂದು ಕೂಡ ಉದ್ಯೋಗ ಸೃಷ್ಟಿ ಮಾಡುತ್ತಿಲ್ಲ. ಹಾಗೆಯೇ ಎಲ್ಲರ ಖಾತೆಗೆ ಹದಿನೈದು ಲಕ್ಷ ರೂ. ಹಾಕುವುದಾಗಿ ಹೇಳಿದ್ದರು. ಆದರೆ ಇದೀಗ ತಲಾ ಒಬ್ಬರಿಗೆ 15 ಲಕ್ಷ ರೂ. ಸಾಲ ಮಾಡಿ ಇಟ್ಟಿದ್ದಾರೆ ಎಂದು ಕಿಡಿ ಕಾರಿದ ಅವರು, ಒಂದು ವೇಳೆ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ತಾಲೂಕಾಧ್ಯಕ್ಷ ಗೌಸೋದ್ದೀನ್, ಸಿಐಟಿಯು ಜಿಲ್ಲಾ ಸಂಚಾಲಕ ಪ್ರಭು ಸಂತೋಷಕರ್ ಹಾಗೂ ಬಸವರಾಜ್ ಮಾಳಗೆ ಸೇರಿದಂತೆ ಹಲವರು ಇದ್ದರು.






