ಬೀದರ್ | ಲೈಂಗಿಕ ಕಿರಕುಳ ತಡೆಗಟ್ಟಲು SHe Box Portal ಬಗ್ಗೆ ಜಾಗೃತಿ ಮೂಡಿಸಿ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಶಿಲ್ಪಾ ಶರ್ಮಾ
ಬೀದರ್ : ಲೈಂಗಿಕ ಕಿರಕುಳ ತಡೆಗಟ್ಟುವಿಕೆಗಾಗಿ SHe Box Portal ಬಗ್ಗೆ ಜಾಗೃತಿ ಮೂಡಿಸಿ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ, ನಿವಾರಿಸುವಿಕೆ) 2013ರ ಕಾಯ್ದೆಯ ನಿಬಂಧನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೆ ತರುವುದಕ್ಕೋಸ್ಕರ SHe Box Portal ನ್ನು ಪ್ರಾರಂಭಿಸಲಾಗಿದೆ. ಸದರಿ ಪೋರ್ಟಲ್, ಎಲ್ಲಾ ಸಾರ್ವಜನಿಕ, ಸರಕಾರಿ ಹಾಗೂ ಖಾಸಗಿ, ಸಾರ್ವಜನಿಕ , ಸಂಘಟಿತ ಅಥವಾ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ಮಹಿಳಾ ಉದ್ಯೋಗಿಯು ತನ್ನ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ದೂರು ದಾಖಲಿಸಲು ಹಾಗೂ ಅದರ ಸ್ಥಿತಿಯನ್ನು ಪತ್ತೆ ಹಚ್ಚಲು ಮಾರ್ಗವನ್ನು ಒದಗಿಸುತ್ತದೆ. ಈ ಪೋರ್ಟಲ್ನ (https://shebox.wcd.gov.in) ಲಿಂಕ್ ಅನ್ನು ಎಲ್ಲಾ ವೆಬ್ಸೈಟ್ಗಳಲ್ಲಿ ಹೈಲೈಟ್ ಮಾಡಲು ಹಾಗೂ ಜಾಗೃತಿ ಮೂಡಿಸಲು ಅವರು ತಿಳಿಸಿದ್ದಾರೆ.
ಜಿಲ್ಲೆಯ 10 ಹಾಗೂ 10ಕ್ಕಿಂತ ಹೆಚ್ಚು ಜನ ಕರ್ತವ್ಯ ನಿರ್ವಹಿಸುವ ಎಲ್ಲಾ ಸರಕಾರಿ ಹಾಗೂ ಖಾಸಗಿ, ಸಾರ್ವಜನಿಕ, ಸಂಘಟಿತ ಅಥವಾ ಅಸಂಘಟಿತ ವಲಯಗಳಲ್ಲಿ ರಚಿಸಿರುವ ಆಂತರಿಕ ದೂರು ಸಮಿತಿಯ ವಿವರಗಳನ್ನು SHe Box Portal ನಲ್ಲಿ ಅಪ್ಲೋಡ್ ಮಾಡದಿದ್ದಲ್ಲಿ, ಸುಪ್ರೀಂ ಕೋರ್ಟ್ ಆದೇಶದಂತೆ ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು. ಹಾಗೆಯೇ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಎದುರಿಸುತ್ತಿರುವ ಮಹಿಳಾ ಉದ್ಯೋಗಿಗಳು ಇದನ್ನು ಬಳಸಲು ಸಾಧ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲೆಯ ಎಲ್ಲಾ ಸರಕಾರಿ, ಸಾರ್ವಜನಿಕ, ಖಾಸಗಿ, ಸಂಘಟಿತ, ಅಸಂಘಟಿತ ವಲಯ ಅಧಿಕಾರಿ, ಮುಖ್ಯಸ್ಥರಿಗೆ ಅವರು ಸೂಚನೆ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ನಗರದ ಮೈಲೂರನಲ್ಲಿರುವ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ದೂರವಾಣಿ ಸಂಖ್ಯೆ : 99807 02545, 83100 32095 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.