Bidar | ಯುವಜನರಲ್ಲಿ ಜಾಗೃತಿ ಮೂಡಿಸುವುದೇ ಹೆಚ್‌ಐವಿ ನಿಯಂತ್ರಣಕ್ಕೆ ಪರಿಣಾಮಕಾರಿ ಮಾರ್ಗ: ಡಾ.ಲಲಿತಮ್ಮ

ಬೀದರ್: ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆ ಜಾಗೃತರಾಗಿರಬೇಕು ಹಾಗೂ ಯಾವುದೇ ರೀತಿಯ ಅಪಾಯಕಾರಿ ವರ್ತನೆಗಳಿಂದ ದೂರವಿರಬೇಕು. ಯುವಜನರಲ್ಲಿ ಸರಿಯಾದ ಮಾಹಿತಿ ಮತ್ತು ಜಾಗೃತಿ ಮೂಡಿಸುವುದೇ ಹೆಚ್‌ಐವಿ/ಏಡ್ಸ್ ನಿಯಂತ್ರಣಕ್ಕೆ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಸ್ತ್ರೀರೋಗ ತಜ್ಞೆ ಡಾ. ಎ.ಸಿ. ಲಲಿತಮ್ಮ ಅಭಿಪ್ರಾಯಪಟ್ಟರು.
ನಗರದ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವಿಕೆ ಸಂಘದ ಮಾರ್ಗದರ್ಶನದಲ್ಲಿ, ಬೀದರ್‌ನ ಕುಟುಂಬ ಯೋಜನಾ ಸಂಘ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಸಂಯುಕ್ತಾಶ್ರಯದಲ್ಲಿ ‘ಮೊಬಿಲೈಸೇಶನ್ ಫಾರ್ ಏಡ್ಸ್ ಸುರಕ್ಷಾ ಅಭಿಯಾನ-2026’ ಧ್ಯೇಯವಾಕ್ಯದಡಿ ಆಯೋಜಿಸಿದ್ದ ಹೆಚ್‌ಐವಿ-ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆಚ್‌ಐವಿ ಸೋಂಕು ಅಸುರಕ್ಷಿತ ಲೈಂಗಿಕ ಸಂಪರ್ಕ, ಸೋಂಕಿತ ರಕ್ತ ವರ್ಗಾವಣೆ, ಸೋಂಕಿತ ಸೂಜಿಗಳ ಬಳಕೆ ಹಾಗೂ ತಾಯಿಯಿಂದ ಮಗುವಿಗೆ ಹರಡುವ ಸಾಧ್ಯತೆಗಳಿವೆ. ಆದರೆ ಹೆಚ್‌ಐವಿ ಸೋಂಕಿತ ವ್ಯಕ್ತಿಗಳೊಂದಿಗೆ ಸಾಮಾನ್ಯ ಸಾಮಾಜಿಕ ಸಂಪರ್ಕ, ಕೈಕುಲುಕುವುದು, ಜೊತೆಯಲ್ಲಿ ಊಟ ಮಾಡುವುದು ಅಥವಾ ಮಾತನಾಡುವುದರಿಂದ ಸೋಂಕು ಹರಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಹೆಚ್‌ಐವಿ ವೈರಸ್ ಹರಡುವ ಮಾರ್ಗಗಳು, ಸೋಂಕು ತಡೆಗಟ್ಟುವ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಸಮಾಜದಲ್ಲಿ ಈ ಕಾಯಿಲೆಯ ಕುರಿತು ಇರುವ ತಪ್ಪು ಕಲ್ಪನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದ ಅವರು, ಅಗತ್ಯವಿದ್ದಲ್ಲಿ ಹೆಚ್‌ಐವಿ ಪರೀಕ್ಷೆ ಮತ್ತು ಸಮಾಲೋಚನಾ ಕೇಂದ್ರಗಳ ಸೇವೆಗಳನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ಎಸ್.ವಿ. ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ಸಮಾಜದಲ್ಲಿಯೂ ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಇಂತಹ ಜಾಗೃತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದರೊಂದಿಗೆ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ ಎಂದು ಅವರು ಹೇಳಿದರು.
ಈ ವೇಳೆ ಪ್ರಾಧ್ಯಾಪಕ ಡಾ.ಮುಹಮ್ಮದ್ ಫಾರೂಕ್ ಅವರು ಮಾತನಾಡಿದರು.
ರೆಡ್‌ಕ್ರಾಸ್ ಘಟಕದ ಅಧಿಕಾರಿ ಹಾಗೂ ವೈದ್ಯಾಧಿಕಾರಿ ಡಾ. ಕವಿತಾ ರಾಠೋಡ್, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಧಿಕಾರಿ ಡಾ. ವಿಜಯಮಹಾಂತೇಶ್, ಡಾ. ರಮೇಶ್ ನಾಯಕ, ಕುಟುಂಬ ಯೋಜನಾ ಸಂಘದ ಸಿಬ್ಬಂದಿಗಳಾದ ವಿಜಯಲಕ್ಷ್ಮೀ, ಸುನೀಲ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ವಿಜಯಮಹಾಂತೇಶ್ ವಂದಿಸಿದರು. ವಿದ್ಯಾರ್ಥಿನಿ ಮಧುಮತಿ ಒಡೆಯರ್ ನಿರೂಪಿಸಿದರು.






