ಬೀದರ್ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರ ಸಮಸ್ಯೆ ಶೀಘ್ರ ಬಗೆಹರಿಸಲು ರೈತ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ

ಬೀದರ್: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಸಂಪೂರ್ಣ ಬೆಳೆ ಹಾನಿಯಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರ ಜ್ವಲಂತ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ಜಿಲ್ಲೆಯ ಎಲ್ಲಾ ಕಬ್ಬು ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ 2,950 ರೂ. ದರ ನಿಗದಿಪಡಿಸಿ ಪ್ರತಿ 15 ದಿನಕ್ಕೊಮ್ಮೆ ಹಣ ಪಾವತಿಸುವುದಾಗಿ ನೀಡಿದ್ದ ಆಶ್ವಾಸನೆಯನ್ನು ಪಾಲಿಸುತ್ತಿಲ್ಲ. ಕೆಲ ಕಾರ್ಖಾನೆಗಳು ಒಂದು ತಿಂಗಳಿಗೂ ಹೆಚ್ಚು ಅವಧಿಯಾದರೂ ರೈತರಿಗೆ ಹಣ ಪಾವತಿಸಿಲ್ಲ ಎಂದು ಆರೋಪಿಸಲಾಯಿತು.
ಅತಿವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿದ ಅನೇಕ ರೈತರಿಗೆ ಇನ್ನೂ ಪರಿಹಾರ ದೊರೆತಿಲ್ಲ. ವಿಶೇಷವಾಗಿ ಔರಾದ್ ತಾಲೂಕಿನ ಚಟ್ನಾಳ್ ಗ್ರಾಮದ ಸುಮಾರು 70 ರೈತರಿಗೆ ಸಂಪೂರ್ಣ ಬೆಳೆ ಹಾನಿಯಾದರೂ ಪರಿಹಾರ ವಿತರಿಸಿಲ್ಲ ಎಂದು ಸಂಘದ ಮುಖಂಡರು ದೂರಿದರು.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕಬ್ಬು ಕಟಾವು ಗ್ಯಾಂಗ್‌ಗಳ ಕೊರತೆ, ಬೆಳೆ ವಿಮೆ ಪರಿಹಾರದ ವಿಳಂಬ, ತೊಗರಿ ಖರೀದಿ ಕೇಂದ್ರಗಳನ್ನು ತಕ್ಷಣ ಆರಂಭಿಸುವುದು, ಹೊರ ರಾಜ್ಯಗಳಿಂದ ಕಬ್ಬು ತರದಂತೆ ನಿರ್ಬಂಧ ವಿಧಿಸುವುದು ಹಾಗೂ ಎಪಿಎಂಸಿಗಳಲ್ಲಿ ಅಕ್ರಮ ಕಡಿತ ಮತ್ತು ಕಮಿಷನ್ ವಸೂಲಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಲಾಯಿತು.
ಈ ಸಮಸ್ಯೆಗಳನ್ನು ಕೂಡಲೇ ಬಗೆಹರಿಸದಿದ್ದರೆ ಸಂಘದ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು. ಮುಂದಾಗುವ ಯಾವುದೇ ಅಹಿತಕರ ಘಟನೆಗೆ ಜಿಲ್ಲಾಡಳಿತವೇ ಹೊಣೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಮಂತ್ ಬಿರಾದಾರ್, ಜಿಲ್ಲಾ ಪ್ರ. ಕಾರ್ಯದರ್ಶಿ ದಯಾನಂದ್ ಸ್ವಾಮಿ ಸಿರ್ಸಿ, ಬಾಬು ಮಾದಪ್ಪಾ, ರಾಜಕುಮಾರ್ ಪಾಟೀಲ್, ಪ್ರಕಾಶ್ ಬಾವಗೆ, ಗಣಪತಿ ಕಾಶೆಪ್ಪಾ, ಶ್ರೀನಿವಾಸ್ ಶಾಮರಾವ್, ಗುರುನಾಥ್ ಮಾಣಿಕರಾಯ ಸೇರಿದಂತೆ ಹಲವು ರೈತ ಮುಖಂಡರು ಉಪಸ್ಥಿತರಿದ್ದರು.







