Bidar | ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹಿಸಿ ದಲಿತ ಸಂಘಟನೆಗಳಿಂದ ಪ್ರತಿಭಟನೆ

ಬೀದರ್: ನಗರ ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯದ ಸರಬರಾಜು ಮತ್ತು ಮಾರಾಟ ರಾಜಾರೋಷವಾಗಿ ನಡೆಯುತ್ತಿದ್ದರೂ ಅಬಕಾರಿ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ, ಸಂಬಂಧಪಟ್ಟ ಅಬಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ವಿವಿಧ ದಲಿತ ಸಂಘಟನೆಗಳ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ರ‍್ಯಾಲಿ ನಡೆಸಿದ ಪ್ರತಿಭಟನಾಕಾರರು ಅಬಕಾರಿ ಉಪ ಆಯುಕ್ತರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ಹಿಂದೆ ಅಕ್ಟೋಬರ್ 14ರಂದು ಅಬಕಾರಿ ಉಪ ಆಯುಕ್ತರಿಗೆ ಮನವಿ ಸಲ್ಲಿಸಿ, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ಮತ್ತು ಸರಬರಾಜನ್ನು ಸಂಪೂರ್ಣವಾಗಿ ತಡೆಗಟ್ಟಬೇಕು. ಮಹಾಪುರುಷರ ವೃತ್ತಗಳ ಸಮೀಪವಿರುವ ವೈನ್‌ಶಾಪ್‌ಗಳನ್ನು ಸ್ಥಳಾಂತರಿಸಬೇಕು. ವೈನ್‌ಶಾಪ್‌ಗಳ ಪಕ್ಕದಲ್ಲಿ ಗ್ರಾಹಕರು ಕುಳಿತು ಮದ್ಯ ಸೇವಿಸಲು ನಿರ್ಮಿಸಿರುವ ಪ್ರತ್ಯೇಕ ಕೊಠಡಿ ಹಾಗೂ ಶೆಡ್‌ಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಲಾಗಿತ್ತು. ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿತ್ತು.
ಆದರೆ, ಒಂದು ತಿಂಗಳು ಕಳೆದರೂ ಮನವಿಗೆ ಸೂಕ್ತ ಸ್ಪಂದನೆ ದೊರೆತಿಲ್ಲ. ಅಕ್ರಮ ಮದ್ಯ ಮಾರಾಟಗಾರರು ಮತ್ತು ಸರಬರಾಜುದಾರರ ವಿರುದ್ಧ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ಶಾಲಾ-ಕಾಲೇಜುಗಳು, ಮಹಾಪುರುಷರ ವೃತ್ತಗಳು, ದೇವಸ್ಥಾನಗಳು ಹಾಗೂ ಚರ್ಚ್‌ಗಳ ಸಮೀಪವೂ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಕೆಲವು ಹಳ್ಳಿಗಳು ಮತ್ತು ನಗರ ಬಡಾವಣೆಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವ ಸ್ಥಳಗಳ ವಿವರ ನೀಡಿದ್ದರೂ ಅಧಿಕಾರಿಗಳು ಪರಿಶೀಲನೆ ನಡೆಸಿ ಮಾರಾಟವನ್ನು ತಡೆಗಟ್ಟಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಅಲ್ಲದೆ, ಪರವಾನಗಿ ಇಲ್ಲದೆ ಧಾಬಾಗಳು ಹಾಗೂ ಖಾನಾವಳಿಗಳಲ್ಲಿ ಮದ್ಯ ಸೇವನೆಗೆ ಅವಕಾಶ ನೀಡಲಾಗುತ್ತಿದೆ. ಹಲವು ವರ್ಷಗಳಿಂದ ಒಂದೇ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಬಕಾರಿ ಸಿಬ್ಬಂದಿಯ ವರ್ಗಾವಣೆಗೂ ಮೇಲಧಿಕಾರಿಗಳಿಗೆ ಶಿಫಾರಸು ಮಾಡಿಲ್ಲ. ಅಬಕಾರಿ ಉಪ ಆಯುಕ್ತರ ನಿರ್ಲಕ್ಷ್ಯ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಕರ್ತವ್ಯಲೋಪದಿಂದ ಅಕ್ರಮ ಚಟುವಟಿಕೆಗಳಿಗೆ ಅವಕಾಶ ದೊರೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮ ಮದ್ಯ ಮಾರಾಟ ಮತ್ತು ಸರಬರಾಜು ತಡೆಗಟ್ಟುವಲ್ಲಿ ವಿಫಲರಾಗಿರುವ ಅಬಕಾರಿ ಉಪ ಆಯುಕ್ತರು, ಅಬಕಾರಿ ಉಪಾಧೀಕ್ಷಕರು, ವಲಯ ನಿರೀಕ್ಷಕರು ಹಾಗೂ ನಿರೀಕ್ಷಕರ ವಿರುದ್ಧ ಸೂಕ್ತ ತನಿಖೆ ನಡೆಸಿ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು. ಅಕ್ರಮ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡಬೇಕು ಎಂದು ಆಗ್ರಹಿಸಿದರು. ಒಂದು ವಾರದೊಳಗೆ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ದಲಿತ ಸೇನೆಯ ರಾಜ್ಯ ಉಪಾಧ್ಯಕ್ಷ ಚಂದ್ರಕಾಂತ್ ಆರ್. ನಿರಾಟೆ, ಡಿಎಸ್‌ಎಸ್ ಪರಿವರ್ತನಾವಾದದ ರಾಜ್ಯ ಸಂಚಾಲಕ ರಾಘವೇಂದ್ರ ಮೀನಕೇರಾ, ಅಂಬೇಡ್ಕರ್ ಯುವ ಸೇನೆಯ ರಾಜ್ಯಾಧ್ಯಕ್ಷ ರಾಜಕುಮಾರ್ ಗೂನಳ್ಳಿ, ನಿತೀಶ್ ಉಪ್ಪೆ, ನರಸಿಂಗ್ ಸಾಮ್ರಾಟ್, ರಾಜೇಂದ್ರ ಕಿಣ್ಣಿಕರ್, ಸಂಜಯ್ ಭೋಸ್ಲೆ, ರಾಜಕುಮಾರ್ ಭಾವಿಕಟ್ಟಿ, ಸ್ವರೂಪಕುಮಾರ್ ಶಿಂಧೆ, ಗೌತಮ್ ಭೋಸ್ಲೆ, ಸತೀಶ್ ಶಿಂಧೆ, ಅಂಬೇಡ್ಕರ್ ಸಾಗರ್, ರಮೇಶ್ ಶಿಂಧೆ, ಘಾಳೆಪ್ಪಾ ಭೋಸ್ಲೆ, ರಾಜಕುಮಾರ್ ಕಾಂಬಳೆ, ವಿಶಾಲ್ ಹೊನ್ನಾ, ಸಂತೋಷ್ ಬೌದ್ಧೆ, ನ್ಯೂಟೌನ್ ಕರಕರೆ, ಜ್ಞಾನಿ ಕಟ್ಟಿಮನಿ ಹಾಗೂ ಬಕ್ಕಪ್ಪಾ ಗುಪ್ತಾ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.






