Bidar | ಮನವಿಗಳಿಗೆ ಸ್ಪಂದಿಸದ ಜಿಲ್ಲಾಡಳಿತದ ವಿರುದ್ಧ ದಲಿತ ಸಂಘರ್ಷ ಸಮಿತಿ ಆಕ್ರೋಶ

ಬೀದರ್: ಸಾರ್ವಜನಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬೀದರ್ ಜಿಲ್ಲಾಧಿಕಾರಿಗಳ ಕಚೇರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಇದುವರೆಗೆ ಯಾವುದೇ ಹಿಂಬರಹ ಅಥವಾ ಕೈಗೊಂಡ ಕ್ರಮಗಳ ಕುರಿತು ಲಿಖಿತ ಮಾಹಿತಿ ನೀಡಿಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಆರೋಪಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಗುರುವಾರ ಸಲ್ಲಿಸಿದ ಮನವಿಯಲ್ಲಿ, ಸಮಿತಿಯ ಜಿಲ್ಲಾ ಸಂಚಾಲಕ ಧನರಾಜ್ ಮುಸ್ತಾಪೂರೆ, ಬಸವರಾಜ್ ಭಾವಿದೊಡ್ಡಿ ಹಾಗೂ ಮಲ್ಲಿಕಾರ್ಜುನ್ ಬಿರಾದಾರ್ ಅವರು ಜಿಲ್ಲಾಡಳಿತವು ಸಾರ್ವಜನಿಕರ ಅಹವಾಲುಗಳ ಬಗ್ಗೆ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ತೋರುತ್ತಿದೆ ಎಂದು ಆರೋಪಿಸಿದ್ದಾರೆ.
ಸಮಿತಿಯು ಏಪ್ರಿಲ್‌ನಿಂದ ಜುಲೈವರೆಗೆ ಹಲವು ಪ್ರಮುಖ ಸಾರ್ವಜನಿಕ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಸಂತಪೂರ್ ಮತ್ತು ಚಿಂತಾಕಿ ಗ್ರಾಮಗಳ ಆಧಾರ್ ಕಾರ್ಡ್ ಕೇಂದ್ರಗಳನ್ನು ಪುನರಾರಂಭಿಸುವಂತೆ ಏ.18ರಂದು ಹಾಗೂ ಬೀದರ್–ಔರಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಣೆ ತಡೆಗೆ ಏ.22ರಂದು ಮನವಿ ಸಲ್ಲಿಸಲಾಗಿತ್ತು. ಆದರೆ, ಜಿಲ್ಲಾಡಳಿತದಿಂದ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ದೂರಲಾಗಿದೆ.
ಅದೇ ರೀತಿ, ಜೂ.1ರಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯ ಸ್ಥಳಾಂತರದ ಕುರಿತು ಹಾಗೂ ಜೂ.15ರಂದು ಹಿಂದುಳಿದ ವರ್ಗಗಳ ಕಲ್ಯಾಣ ಆಯುಕ್ತರಿಗೆ ವಿವಿಧ ಬೇಡಿಕೆಗಳ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗಿತ್ತು. ಔರಾದ್ ತಾಲೂಕಿನಲ್ಲಿ ಮೀನುಗಾರಿಕೆ ಇಲಾಖೆಯ ಯೋಜನೆಯಡಿ ನಡೆದಿರುವ ಅಕ್ರಮ ಮನೆ ಹಂಚಿಕೆ ಕುರಿತು ತನಿಖೆ ನಡೆಸುವಂತೆ ಜು.14ರಂದು ಹಾಗೂ ಜಿಲ್ಲೆಯ ಬರ ಪರಿಸ್ಥಿತಿ ಪರಿಗಣಿಸಿ ಬರಗಾಲ ಘೋಷಿಸುವಂತೆ ಜು.17ರಂದು ಮನವಿ ಸಲ್ಲಿಸಲಾಗಿತ್ತು ಎಂದು ತಿಳಿಸಲಾಗಿದೆ.
ಈ ಎಲ್ಲ ಮನವಿಗಳು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಪ್ರಮುಖ ವಿಷಯಗಳಾಗಿವೆ. ಆದರೆ, ಮನವಿ ಸಲ್ಲಿಸಿ ಹಲವು ದಿನಗಳು ಕಳೆದರೂ ಯಾವುದೇ ಸ್ಪಷ್ಟ ಮಾಹಿತಿ ಅಥವಾ ಹಿಂಬರಹ ನೀಡಿಲ್ಲ. ಸರ್ಕಾರದ ನಿಯಮಾನುಸಾರ ಮನವಿಗಳಿಗೆ 21 ದಿನಗಳೊಳಗೆ ಸ್ಪಂದಿಸಬೇಕಾದರೂ, ನಿಗದಿತ ಅವಧಿ ಮೀರಿದ ಬಳಿಕವೂ ಕ್ರಮದ ಮಾಹಿತಿ ನೀಡದಿರುವುದು ಜಿಲ್ಲಾಡಳಿತದ ಕಾರ್ಯವೈಖರಿ ಕುರಿತು ಪ್ರಶ್ನೆ ಮೂಡಿಸಿದೆ ಎಂದು ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಿರುವ ಎಲ್ಲ ಮನವಿಗಳ ಕುರಿತು ಇದುವರೆಗೆ ಕೈಗೊಂಡಿರುವ ಕ್ರಮಗಳ ಸಂಪೂರ್ಣ ಮಾಹಿತಿಯನ್ನು ಸಂಬಂಧಪಟ್ಟವರಿಗೆ ಲಿಖಿತ ರೂಪದಲ್ಲಿ ನೀಡಬೇಕು. ಮನವಿಗಳ ಬಗ್ಗೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ಜವಾಬ್ದಾರಿ ನಿಗದಿಪಡಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಅಲ್ಲದೆ, ಒಂದೇ ಸ್ಥಳದಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಅವಧಿಯಿಂದ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಮಟ್ಟದ ಅಧಿಕಾರಿಗಳ ಸೇವಾವಧಿಯನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ಸರ್ಕಾರದ ನಿಯಮಾನುಸಾರ ವರ್ಗಾವಣೆ ಕ್ರಮ ಕೈಗೊಳ್ಳಬೇಕು. ಇದರಿಂದ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸಿ ಸಾರ್ವಜನಿಕ ಹಿತ ಕಾಪಾಡಲು ಸಾಧ್ಯವಾಗಲಿದೆ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.






