ಬೀದರ್ | ಅಂಬೇಡ್ಕರ್ ಜಯಂತಿ ವೇಳೆ ಸವರ್ಣೀಯರಿಂದ ದಲಿತರ ಮೇಲೆ ಹಲ್ಲೆ ಆರೋಪ : ಪ್ರಕರಣ ದಾಖಲು

ಬೀದರ್ : ಅಂಬೇಡ್ಕರ್ ಜಯಂತಿ ವೇಳೆ ಸವರ್ಣೀಯರು ದಲಿತರ ಮೇಲೆ ಹಲ್ಲೆ ನಡೆಸಿದ ಘಟನೆ ಭಾಲ್ಕಿ ತಾಲ್ಲೂಕಿನ ಖುದವಂತಪುರ್ ಗ್ರಾಮದಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಮಂಗಳವಾರದಂದು ಖುದವಂತಪುರ್ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಂಬೇಡ್ಕರ್ ಪ್ರತಿಮೆಯ ಮೆರವಣಿಗೆ ಸಂದರ್ಭದಲ್ಲಿ ಸಾರ್ವಜನಿಕರು ಕುಣಿಯುತ್ತಿರುವಾಗ ವಿಕಾಸ್ ಎಂಬ ಸವರ್ಣೀಯ ಯುವಕನೊಬ್ಬ ಕಲ್ಲು ಎಸೆದಿದ್ದ ಎಂದು ಆರೋಪಿಸಲಾಗಿದೆ. ಘಟನೆಯ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ಶಾಂತಗೊಳಿಸಿದ್ದರು.
ಆದರೆ, ಈ ಘಟನೆಯ ಬಳಿಕ ಇದೇ ವಿಷಯ ಸಂಬಂಧ ಬುಧವಾರ ಮುಂಜಾನೆ ಸವರ್ಣೀಯ ಯುವಕರಾದ ಆಕಾಶ್, ದತ್ತಾ ಸೇರಿ ಸುಮಾರು ಹತ್ತು ಜನ ಯುವಕರು ದಲಿತ ಸಮುದಾಯಕ್ಕೆ ಸೇರಿದ ದತ್ತಾತ್ರಿ ಎಂಬವರಿಗೆ ಜಾತಿ ನಿಂದನೆ ನಡೆಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಮೆಹಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
Next Story





