Bidar | ನೃತ್ಯ ಜೀವನದ ಪ್ರತಿಬಿಂಬ, ಭಾವನೆಗಳ ಅಭಿವ್ಯಕ್ತಿ: ಸಂಗೀತಾ ಕಾಂಬಳೆ

ಬೀದರ್: ನೃತ್ಯ ಕೇವಲ ಮನರಂಜನೆಯ ಮಾಧ್ಯಮವಲ್ಲ. ಅದು ಮಾನವನ ಜೀವನದ ಪ್ರತಿಬಿಂಬ ಹಾಗೂ ಭಾವನೆಗಳ ಅಭಿವ್ಯಕ್ತಿಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಸಂಗೀತಾ ಕಾಂಬಳೆ ಹೇಳಿದರು.
ನಗರದ ಡಾ. ಎಸ್.ಎನ್. ಪಂಡಿತ್ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಭಾನುವಾರ ನಡೆದ ಬಕ್‌ಚೌಡಿ ಗ್ರಾಮದ ನೃತ್ಯ ಕಲಾವಿದೆ ಅಕ್ಷತಾ ಆರ್. ಬಾವಿಕಟ್ಟೆ ಅವರ ಏಕವ್ಯಕ್ತಿ ನೃತ್ಯಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತೀಯ ನೃತ್ಯ ಪರಂಪರೆಯು ನಮ್ಮ ಪ್ರಾಚೀನ ಸಂಸ್ಕೃತಿ, ಪುರಾಣಗಳು ಹಾಗೂ ಐತಿಹಾಸಿಕ ಕಥನಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಮುಖ ಮಾಧ್ಯಮವಾಗಿದೆ. ನೃತ್ಯದ ಮೂಲಕ ನೆಲದ ಸಂಸ್ಕೃತಿ, ಜೀವನಶೈಲಿ, ಮೌಲ್ಯಗಳು ಹಾಗೂ ಪರಂಪರೆಗಳನ್ನು ಉಳಿಸಿ ಬೆಳೆಸಲು ಸಾಧ್ಯವಿದ್ದು, ಇಂತಹ ಕಲಾ ಪರಂಪರೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ನೃತ್ಯ ಕಲಾವಿದೆ ಅಕ್ಷತಾ ಆರ್. ಬಾವಿಕಟ್ಟೆ ಏಕವ್ಯಕ್ತಿ ನೃತ್ಯ ಪ್ರದರ್ಶನ ನೀಡಿದರು. ಭಾವಾಭಿನಯ, ಲಯ, ತಾಳ ಹಾಗೂ ಭಾರತೀಯ ಪೌರಾಣಿಕ ಕಥಾನಕಗಳನ್ನು ನೃತ್ಯದ ಮೂಲಕ ಮನೋಜ್ಞವಾಗಿ ಪ್ರಸ್ತುತಪಡಿಸಿ ಪ್ರೇಕ್ಷಕರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಸುರೇಖಾ ಮರೂರ್‌ಕರ್, ವಿಜಯಶ್ರೀ, ಸಂತೋಷ್ ಕೊಂಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.




