ಬೀದರ್ | ಅ.23 ರಂದು ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಚುನಾವಣೆಗೆ ದಿನಾಂಕ ನಿಗದಿ

ಬೀದರ್ : ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ʼಅʼ ವರ್ಗದ ಕಬ್ಬು ಬೆಳೆಗಾರರ ಮತಕ್ಷೇತ್ರದ ಮತದಾನ ಅ. 23 ರ ಬೆಳಿಗ್ಗೆ 9 ರಿಂದ ಸಾಯಂಕಾಲ 4 ಗಂಟೆವರೆಗೆ ಇಮಾಮಪೂರ್ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ನಡೆಯಲಿದೆ ಎಂದು ಇಮಾಮಪೂರ್ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಹಾಗೂ ಬೀದರ್ ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಮಾಮಪೂರ್ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ, ನಿ. ಇದರ ಆಡಳಿತ ಮಂಡಳಿಯ ನಿರ್ದೇಶಕರ ಸಾಮಾನ್ಯ ಚುನಾವಣೆಯು ಸೆ.10 ರಂದು ಹೊರಡಿಸಿದ ಅಧಿಸೂಚನೆಯನ್ನು ಪ್ರಶ್ನಿಸಿ ಕಲಬುರಗಿಯ ಉಚ್ಚ ನ್ಯಾಯಾಲಯ ಪೀಠದಲ್ಲಿ ರೀಟ್ ಅರ್ಜಿ ಸಲ್ಲಿಸಲಾಗಿತ್ತು. ಅದರಂತೆ ಉಚ್ಚ ನ್ಯಾಯಾಲಯವು ಸೆ.27 ರಂದು ನಿಗದಿ ಪಡಿಸಿದ ಕಾರ್ಖಾನೆಯ ಚುನಾವಣೆ ಪ್ರಕ್ರೀಯೆಗೆ ತಡೆಯಾಜ್ಞೆ ನೀಡಿತ್ತು. ಈವಾಗ ಈ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆದುದ್ದರಿಂದ ಕಾರ್ಖಾನೆಯ ಚುನಾವಣೆ ಯಾವ ಹಂತದಲ್ಲಿ ನಿಂತಿದ್ದು, ಅದೇ ಹಂತದಿಂದ ಪ್ರಾರಂಭಿಸಿ 15 ದಿನಗಳೊಳಗಾಗಿ ನಿಯಮಾನುಸಾರ ಫಲಿತಾಂಶ ಘೋಷಿಸಲು ಕಲಬುರಗಿ ಉಚ್ಚ ನ್ಯಾಯಾಲಯದ ಸರ್ಕಾರಿ ವಕೀಲ ಮಲ್ಲಿಕಾರ್ಜುನ್ ಸಾಹುಕಾರ ಅವರು ಇ-ಮೇಲ್ ಮೂಲಕ ಸಂದೇಶ ನೀಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದರಿಂದಾಗಿ ಅ.23 ರಂದು ನಡೆಯುವ ಮತ ಕೇಂದ್ರಗಳಲ್ಲಿ ಹಾಗೂ ಮತದಾನ ನಡೆಯುವ ಆವರಣದಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಮತ ಚಲಾಯಿಸಲು ಬರುವ ಮತದಾರರು ಕಾರ್ಖಾನೆಯಿಂದ ಜಾರಿಯಾದ ಅಧಿಕೃತ ಗುರುತಿನ ಚೀಟಿ ತಂದು ಮತ ಚಲಾವಣೆ ಮಾಡತಕ್ಕದ್ದು. ಮತದಾನ ಸುಗಮವಾಗಿ ನಡೆಸುವ ಸಂಬಂಧ ಸಕಲ ಸಿದ್ಧತೆ ಹಾಗೂ ಸೂಕ್ತ ಪೊಲೀಸ್ ಬಂದೊಬಸ್ತ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.







