ಬೀದರ್ | ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಡಿಸಿ ಶಿಲ್ಪಾ ಶರ್ಮಾರಿಂದ ಬೈಕ್ ರ‍್ಯಾಲಿಗೆ ಚಾಲನೆ

ಬೀದರ್ : ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಆಯೋಜಿಸಿರುವ ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಲು ಜಿಲ್ಲೆಯಿಂದ 10 ಜನ ಬೈಕ್ ಸವಾರರು ಹೊರಟಿದ್ದು, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಚಾಲನೆ ನೀಡಿದರು.
ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಬೈಕ್ ರ‍್ಯಾಲಿಗೆ ಚಾಲನೆ ನೀಡಿದರು.
ಬೆಂಗಳೂರಿನ ರ‍್ಯಾಲಿಯಲ್ಲಿ ಭಾಗವಹಿಸಲು ಬೀದರ್ ಜಿಲ್ಲೆಯ ಸುಮಾರು 10 ಜನ ಬೈಕ್ ಸವಾರರು ಹೊರಟಿದ್ದು, ಸೆ. 14 ರ ಸಂಜೆ ಬೆಂಗಳೂರಿಗೆ ತಲುಪಲಿದ್ದಾರೆ. ಸೆ.15ರಂದು ನಡೆಯುವ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ವಿಶೇಷ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸೆ. 15ರಂದು ಬೀದರ್ ನಗರದಲ್ಲೂ ಕೂಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲಾಗುವುದು. ಈ ಸಂದರ್ಭದಲ್ಲಿ ಸೈಕಲಿಂಗ್ ಜಾಥಾಗಳ ಮೂಲಕ ನನ್ನ ಮತ – ನನ್ನ ಹಕ್ಕು ಎಂಬ ಸಂದೇಶವನ್ನು ಸಾರುತ್ತ, ಪ್ರಜಾಪ್ರಭುತ್ವದ ಮಹತ್ವವನ್ನು ಜನತೆಗೆ ತಲುಪಿಸಲಾಗುವುದು ಎಂದು ಮಾಹಿತಿ ನೀಡಿದ ಅವರು, ಈ ಜಾಥಾ ಮತ್ತು ಕಾರ್ಯಕ್ರಮದಲ್ಲಿ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವದ ಅಸ್ತಿತ್ವವನ್ನು ಬಲಪಡಿಸಲು ತಮ್ಮ ಕೊಡುಗೆ ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಬೀದರ್ ನಿಂದ ಬೆಂಗಳೂರಿಗೆ ವಿಜಯಕುಮಾರ್ ಎಂ.ಸಾವಳೆ, ಮನಮಿತ್ ಸಿಂಗ್, ಪ್ರೀತಮ್ ಸಿಂಗ್, ಹರ್ಪಿತ್ ಬೆದಿ, ಲಿಂಗರಾಜ್, ಗುರುನಾಥ್ ಮೇತ್ರೆ, ಪಂಡಿತ್ ಖಂಡ್ರೆ, ಚಂದ್ರಕಾಂತ್ ಭಾವಿದೊಡ್ಡಿ ಹಾಗೂ ಅಭಿಲಾಷ್ ಯಶಪ್ಪ ಬೈಕ್ ರ‍್ಯಾಲಿ ಮೂಲಕ ಸಾಗಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಪ್ರಕಾಶ್ ಸೂರ್ಯವಂಶಿ, ಸಹಾಯಕ ನಿರ್ದೇಶಕರಾದ ಅನಿಲಕುಮಾರ್ ಮೇಲ್ದೊಡ್ಡಿ, ಸದಾನಂದ್, ನಿಂಗರಾಜ್, ದಿಲೀಪಕುಮಾರ್ ಹಾಗೂ ಜಿಲ್ಲಾ ಪತ್ರಾಂಕಿತ ವ್ಯವಸ್ಥಾಪಕ ಸುಭಾಷ್ ನಾಗುರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.







