Bidar | ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆಗೆ ಡಿಸಿ ಶಿಲ್ಪಾ ಶರ್ಮಾ ಚಾಲನೆ

ಬೀದರ್: ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಬೀದರ್ ಹಾಗೂ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗಳಾದ ಭಾಲ್ಕಿ, ಬಸವಕಲ್ಯಾಣ ಮತ್ತು ಹುಮನಾಬಾದ್ ವತಿಯಿಂದ 2026ರ ನವೆಂಬರ್ ತಿಂಗಳನ್ನು ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆಯಾಗಿ ಆಚರಿಸಲಾಗುತ್ತಿದೆ. ಈ ನಿಮಿತ್ತ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಸಾಚರಣೆಯ ಭಿತ್ತಿಪತ್ರ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಣ್ಣಪುಟ್ಟ ಕೆಲಸಗಳಿಗೂ ವಾಹನಗಳನ್ನು ಬಳಸುವುದನ್ನು ತಪ್ಪಿಸಬೇಕು. ವಿದ್ಯುತ್ ಚಾಲಿತ ವಾಹನಗಳು ಹಾಗೂ ಸೈಕಲ್‌ಗಳ ಬಳಕೆಗೆ ಆದ್ಯತೆ ನೀಡುವ ಮೂಲಕ ವಾಯು ಮಾಲಿನ್ಯ ತಗ್ಗಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಸಾರ್ವಜನಿಕರು ಸಮೂಹ ಸಾರಿಗೆ ವ್ಯವಸ್ಥೆಯನ್ನು ಹೆಚ್ಚು ಬಳಸಿಕೊಳ್ಳಬೇಕು. ಕೇಂದ್ರ ಮೋಟಾರು ವಾಹನ ನಿಯಮಾವಳಿ-1989ರ ನಿಯಮಗಳನ್ವಯ ಎಲ್ಲ ವಾಹನಗಳನ್ನು ಪ್ರತಿ ತಿಂಗಳಿಗೊಮ್ಮೆ ವಾಯು ಮಾಲಿನ್ಯ ತಪಾಸಣೆಗೆ ಒಳಪಡಿಸಿ, ಮಾಲಿನ್ಯ ನಿಯಂತ್ರಣದಲ್ಲಿದೆ ಎಂಬ ಪ್ರಮಾಣಪತ್ರ ಪಡೆಯಬೇಕು. ವಾಯು ಮಾಲಿನ್ಯ ತಗ್ಗಿಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಕರೆ ನೀಡಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಮಹ್ಮದ್ ಜಾಫರ್ ಸಾದಿಕ್ ಮಾತನಾಡಿ, ವಾಹನಗಳ ಮಾಲಿನ್ಯವನ್ನು ನಿಯಂತ್ರಣದಲ್ಲಿ ಇಡದಿದ್ದಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ 1,500 ರೂ. ಹಾಗೂ ಇತರೆ ವಾಹನಗಳಿಗೆ 3,000 ರೂ. ದಂಡ ವಿಧಿಸಲಾಗುತ್ತದೆ. ನಿಯಮ ಉಲ್ಲಂಘನೆ ಪುನರಾವರ್ತನೆಯಾದರೆ ಮೋಟಾರು ವಾಹನ ಕಾಯ್ದೆಯಡಿ ವಾಹನದ ನೋಂದಣಿಯನ್ನು ಅಮಾನತುಗೊಳಿಸುವುದು ಹಾಗೂ ವಾಹನವನ್ನು ವಶಕ್ಕೆ ಪಡೆಯುವಂತಹ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ನವೆಂಬರ್ 30ರವರೆಗೆ ನಡೆಯುವ ಈ ಮಾಸಾಚರಣೆಯಲ್ಲಿ ವಾಹನಗಳಿಂದ ಉಂಟಾಗುವ ವಾಯು ಮಾಲಿನ್ಯ, ಅದರ ದುಷ್ಪರಿಣಾಮಗಳು ಹಾಗೂ ನಿಯಂತ್ರಣ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಭಾಗ್ಯವಂತಿ ಮೋಟಾರ್ ಡ್ರೈವಿಂಗ್ ಸ್ಕೂಲ್‌ನ ಪ್ರಾಚಾರ್ಯ ಶಿವರಾಜ್ ಜಮಾದಾರ್ ಖಾಜಾಪುರ್ ಉಪಸ್ಥಿತರಿದ್ದರು.






