Bidar | ಪರಿಹಾರ ಪಾವತಿ ವಿಳಂಬ: ಕೆಕೆಆರ್‌ಟಿಸಿ ಬಸ್ ಜಪ್ತಿ

ಬೀದರ್: ಭಾಲ್ಕಿ ತಾಲೂಕಿನ ರಸ್ತೆ ಅಪಘಾತ ಪ್ರಕರಣದಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ನ್ಯಾಯಾಲಯ ನಿಗದಿಪಡಿಸಿದ್ದ ಪರಿಹಾರ ಮೊತ್ತವನ್ನು ಪಾವತಿಸದ ಹಿನ್ನೆಲೆಯಲ್ಲಿ ಕೆಕೆಆರ್‌ಟಿಸಿ ಬಸ್‌ವೊಂದನ್ನು ಜಪ್ತಿ ಮಾಡಿರುವ ಘಟನೆ ನಡೆದಿದೆ.
2021ರಲ್ಲಿ ಕೆಕೆಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಹಾಗೂ ರೇಖಾ ಎಂಬ ಮಹಿಳೆಗೆ ಗಂಭೀರ ಗಾಯಗಳಾಗಿದ್ದವು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ರೇಖಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪರಿಹಾರಕ್ಕಾಗಿ ಸಾರಿಗೆ ಸಂಸ್ಥೆಯ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಸಂತ್ರಸ್ತರ ಪರ ತೀರ್ಪು ನೀಡಿ ಪರಿಹಾರ ಪಾವತಿಸುವಂತೆ ಸಾರಿಗೆ ಸಂಸ್ಥೆಗೆ ಆದೇಶಿಸಿತ್ತು. ಆದರೆ, ನ್ಯಾಯಾಲಯದ ಆದೇಶದಂತೆ ಪರಿಹಾರ ಮೊತ್ತ ಪಾವತಿಯಾಗದ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದ ಅನ್ವಯ ಬಸ್ ಜಪ್ತಿ ಮಾಡುವ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಸಂತ್ರಸ್ತರ ಪರ ವಕೀಲರಾದ ಕೆ.ಕೆ. ಶಿವಕುಮಾರ್ ಹಾಗೂ ಅನರಾಜ್ ಹಾವಗೆ ಮಾತನಾಡಿ, “ನ್ಯಾಯಾಲಯ ನಿಗದಿಪಡಿಸಿರುವ 28,80,753 ರೂ. ಪರಿಹಾರ ಮೊತ್ತವನ್ನು ಜಮಾ ಮಾಡಿದ ಬಳಿಕವೇ ಜಪ್ತಿ ಮಾಡಲಾದ ಬಸ್ ಬಿಡುಗಡೆ ಮಾಡಲಾಗುವುದು” ಎಂದು ತಿಳಿಸಿದ್ದಾರೆ.






