ಬೀದರ್ | ಸೈಯದ್ ಮನ್ಸೂರ್ ಖಾದ್ರಿ ಅವರನ್ನು ಹಜ್ ಕಮಿಟಿ ಅಧ್ಯಕ್ಷರನ್ನಾಗಿ ನೇಮಿಸಲು ಒತ್ತಾಯ

ಬೀದರ್ : ಸಾಮಾಜಿಕ ಕಾರ್ಯಕರ್ತ ಸೈಯದ್ ಮನ್ಸೂರ್ ಖಾದ್ರಿ ಅವರನ್ನು ಹಜ್ ಕಮಿಟಿ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಜಾತ್ಯತೀತ ನಾಗರೀಕರ ವೇದಿಕೆಯ ಅಧ್ಯಕ್ಷ ಶ್ರೀಕಾಂತ್ ಚೌಧರಿ ಒತ್ತಾಯ ಮಾಡಿದ್ದಾರೆ.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರಕಾರ ಹಜ್ ಕಮಿಟಿ ರಚಿಸಿದೆ. ಆ ಕಮಿಟಿಯ ಅಧ್ಯಕ್ಷರನ್ನಾಗಿ ನೇಮಕ ಮಾಡುವುದಕ್ಕೆ ಫೆ.5 ನೇ ತಾರೀಕು ನಿಗದಿಗೊಳಿಸಲಾಗಿದೆ. ಹಾಗಾಗಿ ನಮ್ಮ ಬೀದರ್ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ಸೈಯದ್ ಮನ್ಸೂರ್ ಖಾದ್ರಿ ಅವರನ್ನು ಹಜ್ ಕಮಿಟಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಹಜ್ ಸಚಿವ ರಹೀಮ್ ಖಾನ್ ಅವರನ್ನು ಆಗ್ರಹ ಮಾಡಿದ್ದಾರೆ.
ಸೈಯದ್ ಮನ್ಸೂರ್ ಖಾದ್ರಿ ಅವರು ಈಗಾಗಲೇ ಎರಡು ಅವಧಿಗೆ ನಗರ ಸಭೆ ಸದಸ್ಯರಾಗಿದ್ದರು. ಅವರಿಗೆ ಆಡಳಿತದ ಬಗ್ಗೆ ಸಂಪೂರ್ಣ ಜ್ಞಾನ, ಅನುಭವ ಇದೆ. ಅವರು 1999 ರಲ್ಲಿ ಒಂದು ಎನ್ ಜಿ ಒ ಸ್ಥಾಪನೆ ಮಾಡಿ, ಅಂದಿನಿಂದ ಇಂದಿನವರೆಗೆ ಹಜ್ ಗೆ ಹೋಗುವ ಯಾತ್ರಾರ್ಥಿಗಳಿಗೆ ಅರ್ಜಿ ಸಲ್ಲಿಸಿ, ಯಾವ ರೀತಿ ಮಂಜೂರಾತಿ ಪಡೆದುಕೊಳ್ಳಬೇಕು ಎಂಬ ತರಬೇತಿ ನೀಡುತ್ತಿದ್ದಾರೆ ಹಾಗಾಗಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದರು.
ಹೈದರಾಬಾದ್ ಕರ್ನಾಟಕವು ಹಿಂದುಳಿದ ಭಾಗವಾಗಿದೆ. ಈ ಭಾಗಕ್ಕೆ ಎಲ್ಲ ಪಕ್ಷಗಳು ಕಡೆಗಣಿಸುತ್ತ ಬಂದಿವೆ. ಹಾಗೆಯೇ ಹಜ್ ಕಮಿಟಿಯೂ ಕೂಡ ಈ ಭಾಗಕ್ಕೆ ಕಡೆಗಣಿಸಿದೆ. ಈ ಸಲ ನಮ್ಮ ಬೀದರ್ ನಿಂದ ಹಜ್ ಕಮಿಟಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಮುಫ್ತಿ ಅಬ್ದುಲ್ ಗಫರ್ ಅವರು ಮಾತನಾಡಿ, ನಮ್ಮ ಜಿಲ್ಲೆಗೆ ವಜ್ರದಂತಿರುವ ಸೈಯದ್ ಮನ್ಸೂರ್ ಖಾದ್ರಿಯವರ ಕೊಡುಗೆ ಸಮಾಜಕ್ಕೆ ತುಂಬಾ ಇದೆ. ಅವರನ್ನು ಹಜ್ ಕಮಿಟಿಯ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಹಮ್ಮದ್ ಅಸದ್ಧ್ ಅಹಮ್ಮದ್, ಸಯ್ಯದ್ ಸರ್ಫರಾಜ್ ಹಾಶ್ಮಿ, ಆಸಾದುದ್ದಿನ್, ಮೌಲಾನಾ ಅದ್ದಿಕುರ್ ರೆಹಮಾನ್, ಮೌನಿಷ್ ಕಿರ್ಮಾನಿ ಹಾಗೂ ಅಲೆಫುರ್ ರೆಹಮಾನ್ ಸೇರಿದಂತೆ ಇತರರು ಭಾಗವಹಿಸಿದ್ದರು.







