Bidar | ಕಲಾವಿದೆ ಶಾಂತಾಬಾಯಿ ಕಾಂಬಳೆಗೆ ನಿವೇಶನ, ಮನೆ, ಜಮೀನು ಮಂಜೂರು ಮಾಡಲು ಆಗ್ರಹ
ಬೀದರ್: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿದ್ರಿ ಕಲಾವಿದೆ ಶಾಂತಾಬಾಯಿ ಕಾಂಬಳೆ ಅವರಿಗೆ ಸರ್ಕಾರದಿಂದ ನಿವೇಶನ, ಮನೆ ಹಾಗೂ ಜಮೀನು ಮಂಜೂರು ಮಾಡಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಜಿಲ್ಲಾ ಸಂಚಾಲಕ ಮಹೇಶ ಗೋರನಾಳಕರ್ ಒತ್ತಾಯಿಸಿದರು.
ನಗರದ ಸಮತಾ ಪ್ರೌಢಶಾಲೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ, ಬುದ್ಧ ಬೆಳಕು ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್, ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಸಮತಾ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಬಿದ್ರಿ ಕಲಾವಿದೆ ಶಾಂತಾಬಾಯಿ ಕಾಂಬಳೆ ಅವರೊಂದಿಗಿನ ಸಂವಾದ ಮತ್ತು ಜಾನಪದ ಗೀತ ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಂತಾಬಾಯಿ ಕಾಂಬಳೆ ಅವರ ಕಲಾಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಅವರು, ಶಾಂತಾಬಾಯಿ ಅವರು ಇಂದಿಗೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಸರ್ಕಾರದಿಂದ ನಿವೇಶನ, ಮನೆ ಹಾಗೂ ಎರಡು ಎಕರೆ ಭೂಮಿ ಮಂಜೂರು ಮಾಡಬೇಕು. ಅಲ್ಲದೆ, ಬಿದ್ರಿ ನಿಗಮ ಸ್ಥಾಪಿಸಿ ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಾನಪದ ಗಾಯಕ ಶಂಭುಲಿಂಗ ವಾಲ್ದೊಡ್ಡಿ, ಶಾಂತಾಬಾಯಿ ಕಾಂಬಳೆ ಅವರು ಸುಮಾರು 50 ವರ್ಷಗಳಿಂದ ಬಿದ್ರಿ ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಪತಿಯಿಂದ ಕಲಿತ ಈ ಕಲೆಯನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಉದ್ದೇಶದಿಂದ ಮಕ್ಕಳು ಹಾಗೂ ಮೊಮ್ಮಕ್ಕಳಿಗೂ ಕಲಿಸಿದ್ದಾರೆ. ಈ ಕಲೆಯ ಮೂಲಕವೇ ಅವರು ಬದುಕು ಕಟ್ಟಿಕೊಂಡಿದ್ದಾರೆ. ಪತಿ 25 ವರ್ಷಗಳ ಹಿಂದೆ ನಿಧನರಾದ ಬಳಿಕ ಕುಟುಂಬದ ಎಲ್ಲ ಜವಾಬ್ದಾರಿಗಳನ್ನು ಹೊತ್ತು ಜೀವನ ಸಾಗಿಸುತ್ತಿದ್ದಾರೆ. ಇಂತಹ ಕಲಾವಿದೆಯನ್ನು ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಬೀದರ್ ಜಿಲ್ಲೆಗೆ ಸಂತಸ ತಂದಿದೆ. ಅವರ ಕಲಾಸೇವೆ ರಾಜ್ಯಾದ್ಯಂತ ಪರಿಚಯವಾಗುವಂತೆ ದೂರದರ್ಶನದಲ್ಲಿ ಸಂವಾದ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ತಿಳಿಸಿದರು.
ಬಸವೇಶ್ವರ ಬಿ.ಎಡ್. ಕಾಲೇಜಿನ ಉಪನ್ಯಾಸಕಿ ರಾಜೇಶ್ವರಿ ಕೋಟೆರ್ ಮಾತನಾಡಿ, ಬಡತನದ ನಡುವೆಯೂ ತಮ್ಮ ಕಾಯಕದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ಶಾಂತಾಬಾಯಿ ಕಾಂಬಳೆ ಅವರಂತಹ ಸಾಧಕರನ್ನು ಸರ್ಕಾರ ಗುರುತಿಸಿ ಪ್ರಶಸ್ತಿ ನೀಡಬಹುದು ಎಂಬುದಕ್ಕೆ ಅವರೇ ಉದಾಹರಣೆ ಎಂದು ಹೇಳಿದರು.
ಟೀಂ ಯುವ ಸಂಚಾಲಕ ವಿನಯಕುಮಾರ್ ಮಾಳಗೆ ಅವರು ಶಾಂತಾಬಾಯಿ ಅವರೊಂದಿಗೆ ಸಂವಾದ ನಡೆಸಿದರು. ಯುವ ಗಾಯಕಿ ಸಂಗೀತಾ ಕಾಂಬಳೆ ಜಾನಪದ ಗೀತ ಗಾಯನ ನಡೆಸಿಕೊಟ್ಟರು. ಸಮತಾ ಪ್ರೌಢಶಾಲೆಯ ಮುಖ್ಯಶಿಕ್ಷಕ ಬಳಿರಾವ ಕುರನಳೆ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ದಲಿತ ಯುನಿಟಿ ಮೂವ್‌ಮೆಂಟ್ ರಾಜ್ಯಾಧ್ಯಕ್ಷ ಪ್ರಕಾಶ್ ರಾವಣ್, ಸಂಗೀತಾ, ಚಂದ್ರಕಾಂತ್ ಹೊಸದೊಡ್ಡೆ, ಹಿರಾಮಣಿ ಚೌವ್ಹಾಣ, ಆಶಾ ಬಿರಾದಾರ್, ಪ್ರಕಾಶ್ ಬೊರೆ, ಪವನ್ ಕಾಂಬಳೆ, ಅನಿರುದ್ಧ ಅಭಿಧಮ್ಮ, ಬಿ.ಎಡ್. ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಗಮೇಶ್ ಗಂದಗೆ ನಿರೂಪಿಸಿದರು. ಸೌಮ್ಯ ಗುರುಮಿಟಕಲ್ ಸ್ವಾಗತಿಸಿದರು. ನಾಗಪ್ಪ ಕೆಲೊಸಕರ್ ವಂದಿಸಿದರು.








