ಬೀದರ್ | ಮತದಾನದಿಂದ ಪ್ರಜಾಪ್ರಭುತ್ವ ಸದೃಢಗೊಂಡು ಸ್ಥಿರ ಸರಕಾರ ರಚನೆಗೊಳ್ಳುತ್ತದೆ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ್ : ಮತದಾನದಿಂದ ಪ್ರಜಾಪ್ರಭುತ್ವ ಸದೃಢಗೊಂಡು ಸ್ಥಿರ ಸರಕಾರ ರಚನೆಗೊಳ್ಳುತ್ತದೆ. ಇದರಿಂದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಣಬಹುದು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.
ಇಂದು ನಗರದ ಚನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ರಾಷ್ಟ್ರೀಯ ಮತದಾರರ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ 18 ರಿಂದ 21 ವಯಸ್ಸಿನ ಯುವ ಮತದಾರರ ಪಾತ್ರ ಮಹತ್ವದ್ದಾಗಿರುತ್ತದೆ. ಮತದಾರರು ಯಾವುದೇ ಆಸೆ, ಆಮೀಶಗಳಿಗೆ ಒಳಗಾಗದೆ ಜವಾಬ್ದಾರಿಯಿಂದ ತಮ್ಮಿಷ್ಟದ ಅಭ್ಯರ್ಥಿಗೆ ಮತ ಚಲಾಯಿಸಬೇಕು. ಪ್ರತಿ ಐದು ವರ್ಷಕ್ಕೊಮ್ಮೆ ನಮಗೆ ಮತದಾನದ ಅವಕಾಶ ದೊರೆಯುತ್ತದೆ. ಕಾಲೇಜು ವಿದ್ಯಾರ್ಥಿಗಳಲ್ಲಿ ಮತದಾನದ ಜಾಗೃತಿ ಮೂಡಿಸಲು ಜಿಲ್ಲಾಡಳಿತದಿಂದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಯುವಕರು ತಮ್ಮ ಮೊಬೈಲ್ನಲ್ಲಿ ವೋಟರ್ಸ್ ಹೆಲ್ಪ್ ಲೈನ್ ಆಪ್ ಡೌನ್ ಲೋಡ್ ಮಾಡಿ ಫಾರ್ಮ ನಂ. 6 ಭರ್ತಿ ಮಾಡಬೇಕು ಎಂದು ಅವರು ತಿಳಿಸಿದರು.
ಬೀದರ್ ವಿಶ್ವವಿದ್ಯಾಲಯದ ಕುಲಪತಿ ಡಾ.ವಿ.ಎಸ್.ಬಿರಾದಾರ್ ಮಾತನಾಡಿ, ಭಾರತವು ಬಲಿಷ್ಠವಾದ ಪ್ರಜಾಪ್ರಭುತ್ವ ದೇಶ. ಅರ್ಹ ಮತದಾರರು ತಪ್ಪದೇ ಮತಗಟ್ಟೆಗೆ ತೆರಳಿ ಮತ ಚಲಾಯಿಸಿ ತಮ್ಮಿಷ್ಟದ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಮತದಾನದ ದಿನದಂದು ಮತ ಹಾಕಲು ಯಾವುದೇ ನೆಪ ಹೇಳದೆ, ತಪ್ಪದೇ ಮತದಾನ ಮಾಡಬೇಕು. ಮತಕ್ಕಿಂತ ಮಹತ್ವ ಇನ್ನೊಂದಿಲ್ಲ. ನಾನು ಖಚಿತವಾಗಿ, ಕಡ್ಡಾಯವಾಗಿ ಮತದಾನ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಬೇಕು. 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳು, ರಾಷ್ಟ್ರೀಯ ಮತದಾರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಮತದಾನ ಜಾಗೃತಿ ಕುರಿತು ರಿಲ್ಸ್ ಹಾಗೂ ಮತದಾರರ ಜಾಗೃತಿ ಲೋಗೋ ತಯಾರಿಸಿದವರಿಗೆ ಪ್ರಶಸ್ತಿ ಪ್ರಧಾನ ಮಾಡಿ, ಯುವ ಮತದಾರರಿಗೆ ಸಾಂಕೇತಿಕವಾಗಿ ಎಪಿಕ್ ಕಾರ್ಡ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಸಹಾಯಕ ಆಯುಕ್ತ ಎಂ.ಡಿ.ಶಕೀಲ್, ಅಪರ್ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮುತ್ತಣ್ಣ ಕಲಿಗಾರ್, ಬೀದರ್ ವಿಶ್ವವಿದ್ಯಾಲಯದ ಕುಲಸಚಿವೆ ಸುರೇಖಾ, ಮಾಸ್ಟರ್ ಟ್ರೇನರ್ ಗೌತಮ ಅರಳಿ ಹಾಗೂ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿ ಮತ್ತು ಶಿಕ್ಷಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.







