ಬೀದರ್ ಅಭಿವೃದ್ಧಿಗೆ ಬಜೆಟ್ ನಲ್ಲಿ 200 ಕೋಟಿ ರೂ. ಅನುದಾನ ಘೋಷಣೆ: ಸಂತಸ ವ್ಯಕ್ತಪಡಿಸಿದ ಸಚಿವ ರಹೀಂ ಖಾನ್

ಬೀದರ್ : ಮುಖ್ಯಮಂತ್ರಿ ಸಿದ್ದರಾಮಯ್ಯನವರ 17ನೇ ದಾಖಲೆ ಬಜೆಟ್‍ನಲ್ಲಿ ಬೀದರ್ ಜಿಲ್ಲೆಯ ಅಭಿವೃದ್ಧಿಗೆ ಮಹಾಪೂರವೇ ಹರಿದುಬಂದಿದೆ. ನಮ್ಮ ಭಾಗದ ಜನರ ಬಹುದಿನಗಳ ಬೇಡಿಕೆಗಳಿಗೆ ಸ್ಪಂದಿಸಿದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕೋಟಿ ಕೋಟಿ ಧನ್ಯವಾದಗಳು ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರು ತಿಳಿಸಿದ್ದಾರೆ.
ಬೀದರ್ ಮಹಾನಗರ ಪಾಲಿಕೆಗೆ 200 ಕೋಟಿ ರೂ. ಘೋಷಣೆಯಾಗಿದೆ. ಬೀದರ್ ನಗರವು ಇತ್ತೀಚೆಗೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿತ್ತು. ಇದೀಗ ಮಹಾತ್ಮ ಗಾಂಧಿ ನಗರೋತ್ಥಾನ ಯೋಜನೆ 2.0 ರ ಅಡಿಯಲ್ಲಿ ನಗರದ ಮೂಲಸೌಕರ್ಯ, ರಸ್ತೆ, ಚರಂಡಿ ಮತ್ತು ಸಮಗ್ರ ಅಭಿವೃದ್ಧಿಗಾಗಿ ಬರೋಬ್ಬರಿ 200 ಕೋಟಿ ರೂ. ವಿಶೇಷ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಇದು ನಮ್ಮ ನಗರದ ಚಿತ್ರಣವನ್ನೇ ಬದಲಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಬದ್ಧವಾಗಿದೆ. ಹಜ್ ಯಾತ್ರಿಕರ ಅನುಕೂಲಕ್ಕಾಗಿ ಕಲಬುರಗಿ ಮತ್ತು ಹುಬ್ಬಳ್ಳಿ ನಗರಗಳಲ್ಲಿ ಸುಸಜ್ಜಿತವಾದ ನೂತನ ಹಜ್ ಭವನಗಳು ನಿರ್ಮಿಸಲು ಬಜೆಟ್‍ನಲ್ಲಿ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಬೀದರ್ ಪಶುವೈದ್ಯಕೀಯ ಕಾಲೇಜಿನಲ್ಲಿ ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಸಿಟಿ ಸ್ಕ್ಯಾನ್ (CT Scan) ಕೇಂದ್ರ ಸ್ಥಾಪನೆ ಹಾಗೂ ಬೀದರ್ ನಲ್ಲಿ ಶ್ವಾನ ಜನ್ಮ ನಿಯಂತ್ರಣ ತರಬೇತಿ ಕೇಂದ್ರ (Dog Birth-control Training Center) ಸ್ಥಾಪನೆಗೆ ನಿರ್ಧರಿಸಲಾಗಿದೆ. ಬೀದರ್ ಕ್ಷೇತ್ರದ ಶಾಸಕನಾಗಿ ಮತ್ತು ಸಚಿವನಾಗಿ, ಈ ಎಲ್ಲಾ ಅನುದಾನಗಳನ್ನು ಪ್ರಾಮಾಣಿಕವಾಗಿ ಬಳಸಿ ನಮ್ಮ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಲು ನಾನು ಶ್ರಮಿಸುತ್ತೇನೆ ಎಂದು ಸಚಿವ ರಹೀಂ ಖಾನ್ ಅವರು ಭರವಸೆ ನೀಡಿದ್ದಾರೆ.







