Bidar | ಧಮ್ಮಚಕ್ರ ಪರಿವರ್ತನ ದಿನಾಚರಣೆ: ಬೌದ್ಧ ವಿಹಾರಕ್ಕೆ ವಿಶೇಷ ಬಸ್ ವ್ಯವಸ್ಥೆಗೆ ಮನವಿ

ಬೀದರ್: ಧಮ್ಮಚಕ್ರ ಪರಿವರ್ತನ ಹಾಗೂ ಅಶೋಕ ವಿಜಯ ದಶಮಿ ದಿನದ ಅಂಗವಾಗಿ ಮನ್ನಾಏಖೆಳ್ಳಿಯ ರೇಕುಳಗಿ ಮೌಂಟ್ನಲ್ಲಿರುವ ಅನಾಥ ಪಿಂಡಕ ಬೌದ್ಧ ವಿಹಾರಕ್ಕೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಕೆಕೆಆರ್ಟಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಈ ಕುರಿತು ಕೆಕೆಆರ್ಟಿಸಿ ಸಾರಿಗೆ ಸಂಸ್ಥೆಯ ಅಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ, ಅ.20ರಂದು ಮನ್ನಾಏಖೆಳ್ಳಿಯ ರೇಕುಳಗಿ ಮೌಂಟ್ನ ಅನಾಥ ಪಿಂಡಕ ಬೌದ್ಧ ವಿಹಾರದಲ್ಲಿ ಧಮ್ಮಚಕ್ರ ಪರಿವರ್ತನ ಹಾಗೂ ಅಶೋಕ ವಿಜಯ ದಶಮಿ ಕಾರ್ಯಕ್ರಮ ನಡೆಯಲಿದೆ. ಅಂದು ತಥಾಗತ ಬುದ್ಧರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೌದ್ಧ ವಿಹಾರಕ್ಕೆ ಆಗಮಿಸಲಿದ್ದಾರೆ. ಜಿಲ್ಲೆಯ ವಿವಿಧ ಗ್ರಾಮಗಳು, ಹೋಬಳಿಗಳು ಹಾಗೂ ಪಟ್ಟಣಗಳಿಂದ ಸಾವಿರಾರು ಜನರು ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.
ಬೌದ್ಧ ವಿಹಾರಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ಅನುಯಾಯಿಗಳಿಗೆ ಕಾರ್ಯಕ್ರಮಕ್ಕೆ ಆಗಮಿಸಲು ತೊಂದರೆಯಾಗಲಿದೆ. ಹೀಗಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ಕೆಕೆಆರ್ಟಿಸಿ ವತಿಯಿಂದ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಉತ್ತಮ್ ಕೆಂಪೆ, ಉಪಾಧ್ಯಕ್ಷ ರಮೇಶ್ ಮಾಲೆ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೌತಮ್ ಡಾಕುಳಗಿ ಉಪಸ್ಥಿತರಿದ್ದರು.




