ಬೀದರ್ | ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ಧರಣಿ ಸತ್ಯಾಗ್ರಹ

ಬೀದರ್ : ಬಸವಕಲ್ಯಾಣ ಹಾಗೂ ಹುಲಸೂರ್ ತಾಲೂಕಿನಲ್ಲಿ ಹೆಚ್ಚಾಗಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಅದನ್ನು ತಡೆಗಟ್ಟಬೇಕು ಎಂದು ಬಸವಕಲ್ಯಾಣದಲ್ಲಿ ಜನರ ಧ್ವನಿ ಹಾಗೂ ಭಾರತೀಯ ದಲಿತ್ ಪ್ಯಾಂಥರ್ ಸಂಘಟನೆಯಿಂದ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಬಸವಕಲ್ಯಾಣದ ತಹಶೀಲ್ದಾರ್ ಅವರ ಮೂಲಕ ಜಿಲ್ಲಾ ಅಬಕಾರಿ ಉಪ ಆಯುಕ್ತರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಬಸವಕಲ್ಯಾಣ ಹಾಗೂ ಹುಲಸೂರ್ ತಾಲ್ಲೂಕಿನಲ್ಲಿ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಹಳ್ಳಿಯಲ್ಲಿನ ಬಡ ಕುಟುಂಬದಲ್ಲಿ ಪ್ರತಿನಿತ್ಯ ಜಗಳ ನಡೆಯುತ್ತಿವೆ. ಹೆಣ್ಣು ಮಕ್ಕಳು ತುಂಬಾ ತೊಂದರೆ ಅನಭವಿಸುತ್ತಿದ್ದಾರೆ. ಒಂದೊಂದು ಸಲ ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದ್ದಾರೆ.
ಪರವಾನಗಿ ಪಡೆದವರು ಮಾತ್ರ ಮದ್ಯ ಮಾರಾಟ ಮಾಡಬೇಕು. ಆದರೆ ಬಸವಕಲ್ಯಾಣ ಮತ್ತು ಹುಲಸೂರ್ ತಾಲ್ಲೂಕಿನಲ್ಲಿ ಪರವಾನಗಿ ಇಲ್ಲದಿದ್ದರೂ ಮದ್ಯ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಹಳ್ಳಿಯ ಕಿರಾಣ ಅಂಗಡಿ, ಪಾನ್ ಶಾಪ್, ಸೈಕಲ್ ಅಂಗಡಿ ಮತ್ತು ಹೋಟೆಲ್ ಗಳಲ್ಲಿ ಮುಕ್ತವಾಗಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದರಿಂದ ಬಡ ಜನರು ಹಾಳಾಗುತ್ತಿದ್ದಾರೆ. ಬಸವಕಲ್ಯಾಣ ಹಾಗೂ ಹುಲಸೂರ್ ತಾಲೂಕಿನ ಗ್ರಾಮಗಳಲ್ಲಿ ಅನಧಿಕೃತ ಸಾರಾಯಿ ಮಾರಾಟ ಮಾಡುತ್ತಿರುವುದು ತಡೆಹಿಡಿಯಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜನರ ಧ್ವನಿ ಸಂಘಟನೆಯ ತಾಲೂಕು ಅಧ್ಯಕ್ಷ ಮಾರುತಿ ಕಾಂಬ್ಳೆ, ಉಪಾಧ್ಯಕ್ಷ ರತನ್ ಗಾಯಕವಾಡ, ತಾಲ್ಲೂಕು ಕಾರ್ಯದರ್ಶಿ ಅವಿನಾಶ್ ಫುಲಬನೆ, ಶಿವರಾಮ್ ಮಂಠಾಳ್, ಮನೋಜ್ ಖೇಲೆ, ರಾಜು ಸೂರ್ಯವಂಶಿ, ಜನ ಜಾಗೃತಿ ಮಹಿಳಾ ಸೇವಾ ಕೇಂದ್ರದ ತಾಲೂಕು ಅಧ್ಯಕ್ಷೆ ರಾಜೇಶ್ವರಿ ಮೋರೆ, ದಲಿತ್ ಪ್ಯಾಂಥರ್ ನ ಜಿಲ್ಲಾಧ್ಯಕ್ಷ ವೈಜಿನಾಥ್ ಸಿಂಧೆ, ತಾಲೂಕು ಅಧ್ಯಕ್ಷ ಅಶೋಕ್ ಸಿಂಧೆ, ಸತೀಶ್ ಗಾಯಕವಾಡ್, ಸುನೀಲ್ ಹಂದಿಕೇರಿ, ಅಶೋಕ್ ಕಾಂಬಳೆ, ನಾಗನಾಥ್ ಬನಸೋಡೆ, ದೇವಾನಂದ್ ತೊಳೆ ಹಾಗೂ ಅನಿಲ್ ವಡಿಯಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.







