ಬೀದರ್ | ಧರ್ಮಸ್ಥಳ ಪ್ರಕರಣ : ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹ

ಬೀದರ್ : ಧರ್ಮಸ್ಥಳದಲ್ಲಿ ಸೌಜನ್ಯಳ ಕೊಲೆಯಾಗಿ ಇಂದಿಗೆ 13 ವರ್ಷ ಕಳೆಯಿತು. ಆದರೆ ಸೌಜನ್ಯಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಗಳಿಗೆ ಶಿಕ್ಷೆ ನೀಡಲಿಲ್ಲ. ಅಲ್ಲಿನ ಅಸಹಜ ಸಾವುಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯಿಂದ ಸೌಜನ್ಯ ಕೊಲೆ ದಿನವನ್ನು 'ನ್ಯಾಯಕ್ಕಾಗಿ ಜನಾಗ್ರಹ ದಿನ' ಎಂದು ಪ್ರತಿಭಟನೆ ನಡೆಸಲಾಯಿತು.
ಗುರುವಾರ ಹುಮನಾಬಾದ್ ನ ತಹಶೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಧರ್ಮಸ್ಥಳದಲ್ಲಿ ನೂರಾರು ಅಸಹಜ ಸಾವು, ಕೊಲೆ, ಅತ್ಯಾಚಾರವಾಗಿದ್ದು, ಅಲ್ಲಿನ ದಲಿತರಿಗೆ ಸೇರಿದ ಭೂಮಿ ಕಬಳಿಕೆ ಮಾಡಲಾಗಿದೆ. ಸೌಜನ್ಯಳಿಗೆ ಅತ್ಯಾಚಾರವೆಸಗಿ ಕೊಲೆ ಮಾಡಿ ಇಂದಿಗೆ 13 ವರ್ಷ ತುಂಬಿವೆ. ಆದರೆ ಸೌಜನ್ಯ ಪ್ರಕರಣದಲ್ಲಿ ಸಂತೋಷರಾವ್ ಎನ್ನುವ ನೀರ್ದೋಷಿಯನ್ನು ಬಂಧಿಸಿ ಖುಲಾಸೆಗೊಳಿಸಲಾಗಿತ್ತು. ಇನ್ನು ಕೂಡ ಸೌಜನ್ಯಳಿಗೆ ಅತ್ಯಾಚಾರವೆಸಗಿ ಕೊಲೆ ಮಾಡಿದ ನೈಜ ಆರೋಪಿಗಳನ್ನು ಬಂಧಿಸುವಲ್ಲಿ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ ಎಂದು ಆರೋಪಿಸಲಾಗಿದೆ.
ಸೌಜನ್ಯಳ ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷಿ ನಾಶ ಮಾಡಿ ತಪ್ಪೇಸಗಿದ ವೈದ್ಯ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತವಾದ ಕ್ರಮ ಕೈಗೊಳ್ಳಬೇಕು. ನಿಜವಾದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಧರ್ಮಸ್ಥಳದಲ್ಲಿನ ಅಸಹಜ ಸಾವು, ಕೊಲೆ, ಅತ್ಯಾಚಾರ, ಹಲ್ಲೆ, ಶವ ಹೂತಿಟ್ಟ, ಹುಡುಗಿಯರ ನಾಪತ್ತೆ ಪ್ರಕರಣ ಭೇದಿಸಲು ಸರ್ಕಾರ ಎಸ್ಐಟಿ ರಚನೆ ಮಾಡಿದ್ದು, ಅಲ್ಲಿ ನಡೆದಿರುವ ಕೊಲೆಗಳ ಬಗ್ಗೆ ರಾಜ್ಯದ ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದರೂ ಸಹಿತ ಅದನ್ನು ಎಸ್ಐಟಿ ತನಿಖೆಗೆ ಒಪ್ಪಿಸಬೇಕು. ವಿರೋಧ ಪಕ್ಷವಾಗಿರುವ ಬಿಜೆಪಿ ಹಾಗೂ ಪಟ್ಟಭದ್ರ ಶಕ್ತಿಗಳು ಎಸ್ಐಟಿ ತನಿಖೆಯನ್ನು ಸ್ಥಗಿತಗೊಳಿಸಲು ಪ್ರಯತ್ನ ನಡೆಸುತ್ತಿವೆ. ಎಸ್ಐಟಿಯನ್ನು ಒತ್ತಡಕ್ಕೆ ತಳ್ಳಲು ವಿರೋಧ ಪಕ್ಷವಾಗಿರುವ ಬಿಜೆಪಿಯು ಬಹಿರಂಗವಾಗಿ ದೂರುದಾರ ಹಾಗೂ ಸಾಕ್ಷಿದಾರರನ್ನು ಬೆದರಿಸುತ್ತಿದೆ. ಸರ್ಕಾರ ಯಾವುದೇ ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಸೌಜನ್ಯ, ಪದ್ಮಲತಾ, ವೇದವಲ್ಲಿ, ಮಾವುತ ನಾರಾಯಣ, ಯಮುನಾ ಕೊಲೆ ಪ್ರಕರಣ ಸೇರಿದಂತೆ ಭೂ ಕಬಳಿಕೆ, ಮೈಕ್ರೋ ಫೈನಾನ್ಸ್ ದೌರ್ಜನ್ಯಗಳು, ದಲಿತರ ಮೀಸಲು ಭೂಮಿ ಕಬಳಿಕೆ ಹಾಗೂ ಆರ್ಥಿಕ ಅಪರಾಧದ ಆರೋಪದ ಪ್ರಕರಣಗಳನ್ನು ಇವಾಗ ರಚಿಸಿರುವ ಎಸ್ಐಟಿ ಗೆ ವಹಿಸಲು ಸಮಸ್ಯೆಗಳಿದ್ದಲ್ಲಿ ಇಅದಕ್ಕಾಗಿಯೇ ಪ್ರತ್ಯೇಕವಾದ ವಿಶೇಷ ತನಿಖಾ ತಂಡ ರಚಿಸಿ ಸೂಕ್ತವಾದ ತನಿಖೆಗೆ ಒಳಪಡಿಸಬೇಕು ಎಂದು ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಶೀಲಾ ರೆಡ್ಡಿ, ಅಧ್ಯಕ್ಷೆ ಕುಶಾಲಾ ಹುಣಜಿ, ಪ್ರಭು ಸಂತೋಷ್ಕರ್, ಬಸವರಾಜ್ ಮಾಳಗೆ, ಲಖನ್ ಮಹಾಜನ್, ಸರಸ್ವತಿ ಬನ್ನಿ, ಶ್ರೀಮಂತ್ ಮೇತ್ರೆ, ಸಿಮೋನ್ ಮೇತ್ರೆ, ರಾಜಕುಮಾರ್, ಲಾಲಪ್ಪಾ ರಾಂಪುರೆ, ಬಸವರಾಜ್ ಹಾಗೂ ಅಂಜಯ್ಯ ಸೇರಿದಂತೆ ಇತರರು ಇದ್ದರು.







