ಬೀದರ್ | ವಿವಿಧ ಅಂಗನವಾಡಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಭೇಟಿ

ಬೀದರ್ : ನಗರದ ವಿವಿಧ ಅಂಗನವಾಡಿ ಕೇಂದ್ರ ಮತ್ತು ಕಿತ್ತೂರು ರಾಣಿ, ಮಹಿಳಾ ಮಂಡಳ ಸ್ವಯಂ ಸೇವಾ ಸಂಸ್ಥೆ ಮುಖಾಂತರ ಕಾರ್ಯನಿರ್ವಹಿಸುತ್ತಿರುವ ಸ್ವಾಧಾರ ಕೇಂದ್ರಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಆಕಸ್ಮಿಕವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ನಗರದ ನಯಾಕಮಾನ ಅಂಗನವಾಡಿ ಕೇಂದ್ರದ ವ್ಯಾಪ್ತಿಯಲ್ಲಿನ ಫಲಾನುಭವಿಯ ಮನೆಗೆ ಭೇಟಿ ನೀಡಿದ ಅವರು, ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆಯ ಕುರಿತು ಪ್ರೋತ್ಸಾಹಧನ ತಲುಪಿರುವ ಬಗ್ಗೆ ಪರಿಶೀಲನೆ ಮಾಡಿ ಆ ಯೋಜನೆಯ ಕುರಿತು ಫಲಾನುಭವಿಗಳೊಂದಿಗೆ ಚರ್ಚಿಸಿದರು. ಹಾಗೆಯೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜನನಿ ಸುರಕ್ಷಾ ಯೋಜನೆ, ಚುಚ್ಚು ಮದ್ದು ನೀಡಿರುವ ಕುರಿತು ಮಕ್ಕಳನ್ನು ಪರೀಕ್ಷಿಸಿದರು.
ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಪೋಷಣ ಅಭಿಯಾನ ಯೋಜನೆ ಪೋಷಣ ಟ್ರಾಕರ್ ದಾಖಲಾತಿ, ತೂಕ ಹಾಗೂ ಎತ್ತರದ ಬಗ್ಗೆ ಮಾಹಿತಿ ಪಡೆದರು. ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿಯರಿಗೆ ನೀಡುವ ಉಪಾಹಾರ ಮತ್ತು ಕೋಳಿ ಮೊಟ್ಟೆಗಳನ್ನು ನೀಡಿರುವ ಬಗ್ಗೆ ಪರಿಶೀಲನೆ ಮಾಡಿದರು.
ಬೀದರ್ ತಾಲ್ಲೂಕಿನಲ್ಲಿ 11,476 ಗರ್ಭೀಣಿಯರು ನೋಂದಣಿ ಮಾಡಿಕೊಂಡಿದ್ದು, ಇವರೆಲ್ಲರೂ ತಾಯಿ ಕಾರ್ಡ್ ಪಡೆದುಕೊಂಡಿರುವುದರ ಬಗ್ಗೆ ಹಾಗೂ ಮಕ್ಕಳಿಗೆ ಚುಚ್ಚು ಮದ್ದು ನೀಡಿರುವ ಬಗ್ಗೆ ಪರಿಶೀಲನೆ ಮಾಡಿ ಎಲ್ಲ ಗರ್ಭೀಣಿಯರಿಗೆ ತಾಯಿ ಕಾರ್ಡ್ ಸಿಗುವಂತೆ ನೋಡಿಕೊಳ್ಳಬೇಕು. ಅದೇ ರೀತಿ ಚಿಕಿತ್ಸೆಯ ವಿವರಗಳನ್ನು ತಾಯಿ ಕಾರ್ಡ್ ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಸಂಗಾರೆಡ್ಡಿ ಅವರಿಗೆ ಸೂಚನೆ ನೀಡಿದರು.
ಬೀದರ್ ತಾಲ್ಲೂಕಿನಲ್ಲಿ ಕಿತ್ತೂರು ರಾಣಿ ಮಹಿಳಾ ಮಂಡಳ ಸ್ವಯಂ ಸೇವಾ ಸಂಸ್ಥೆ ಮುಖಾಂತರ ಕಾರ್ಯನಿರ್ವಹಿಸುತ್ತಿರುವ ಸ್ವಾಧಾರ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ಫಲಾನುಭವಿಗಳ ಜೊತೆ ಸಂವಾದ ನಡೆಸಿದರು. ಕೇಂದ್ರದಲ್ಲಿ ನೀಡುತ್ತಿರುವ ಸೌಕರ್ಯಗಳ ಕುರಿತು ಅವರ ಜೊತೆ ಚರ್ಚಿಸಿದರು. ಹಾಗೆಯೇ ಹೊಲಿಗೆ ಯಂತ್ರ ತರಬೇತಿ ಪಡೆದ ಫಲಾನುಭವಿಯಾದ ಸಂಗೀತಾ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು.
ಜನನಿ ಸುರಕ್ಷಾ ಯೋಜನೆ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಹಾಗೂ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಿಂದ ಯಾವುದೇ ಫಲಾನುಭವಿಯು ಹೊರಗೆ ಉಳಿಯದಂತೆ ನೋಡಿಕೊಳ್ಳಬೇಕು ಎಂದು ಉಪಸ್ಥಿತರಿದ್ದ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಹೇಳಿ, ನಗರ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಹೆಚ್ಚು ಗಮನ ಹರಿಸುವಂತೆ ನಗರ ಸಭೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.







