ಬೀದರ್ | ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಅಧ್ಯಯನ ಕೇಂದ್ರಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಭೇಟಿ

ಬೀದರ್ : ನಗರದ ಜನವಾಡ ರಸ್ತೆ ಶಹಾಗಂಜ್ ನಲ್ಲಿರುವ ಕರ್ನಾಟಕ ಸರ್ಕಾರದ ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಅಧ್ಯಯನ ಕೇಂದ್ರಕ್ಕೆ ಇಂದು ಸಾಯಂಕಾಲ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಭೆಟಿ ನೀಡಿ ಪರಿಶೀಲನೆ ನಡೆಸಿದರು.
ವಿಶ್ವವಿದ್ಯಾಲಯದಲ್ಲಿ ಹಾಳಾಗಿರುವ ಕೊಠಡಿ, ಕಿಟಕಿ ಬಾಗಿಲು, ಪೀಠೋಪಕರಣ, ಸುಣ್ಣ ಬಣ್ಣ ಮತ್ತು ಶೌಚಾಲಯ ಸೇರಿದಂತೆ ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿ, ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರವು ಮುಚ್ಚಿರುವ ಬಗ್ಗೆ ವಿಶ್ವವಿದ್ಯಾಲಯ ಕುಲಪತಿಗಳ ಜೊತೆ ಚರ್ಚಿಸಿ ಪುನಃ ಆರಂಭ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕಲ್ಯಾಣ ಕರ್ನಾಟಕ ಭಾಗದ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿವಿಗಾಗಿ ಈ ಪ್ರಾದೇಶಿಕ ಅಧ್ಯಯನ ಕೇಂದ್ರ ಮರು ಪ್ರಾರಂಭಿಸುವ ಮೂಲಕ ಇಲ್ಲಿನ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡಲಾಗುವುದು. ಉಪನ್ಯಾಸಕರ ಮತ್ತು ಸಿಬ್ಬಂದಿಗಳ ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ರಮ್ಯಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ್ ಸಿಂಧೆ, ಪ್ರಾದೇಶಿಕ ಜಾನಪದ ಅಕಾಡೆಮಿ ಸದಸ್ಯ ಮತ್ತು ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಅಧ್ಯಯನ ಕೇಂದ್ರದ ಮುಖ್ಯಸ್ಥ ವಿಜಯಕುಮಾರ್ ಸೋನಾರೆ, ಅಧ್ಯಯನ ಕೇಂದ್ರ ಕಚೇರಿ ಸಹಾಯಕ ಶ್ರೀಧರ್ ಜಾಧವ್, ಸುನೀಲ್ ಭಾವಿಕಟ್ಟಿ, ಅಂಬರೀಶ್ ಮಲ್ಲೇಶಿ, ಮಾರುತಿ ಮಾಸ್ಟರ್ ಹಾಗೂ ಗುರು ಸೇರಿದಂತೆ ಇತರರು ಇದ್ದರು.







